– ಎಲ್ಲರೂ ಮತದಾನ ಮಾಡುವಂತೆ ಜ್ಯೋತಿ ಆಮ್ಗೆ ಮನವಿ
ಮುಂಬೈ: ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ ಅವರು ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಮತ ಚಲಾಯಿಸಿದ್ದು, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದೆ. ಮಹಾರಾಷ್ಟ್ರದ ನಾಗ್ಪುರ್ ದ ಮತಗಟ್ಟೆಯಲ್ಲಿ ಜ್ಯೋತಿ ಆಮ್ಗೆ ಮತದಾನ ಮಾಡಿದರು.
ಮತದಾನದ ಬಳಿ ಮಾತನಾಡಿದ ಜ್ಯೋತಿ ಆಮ್ಗೆ ಅವರು, ಎಲ್ಲರೂ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಮೊದಲು ಮತದಾನ ಮಾಡಿ, ನಂತರ ನಿಮ್ಮ ಕೆಲಸದಲ್ಲಿ ತೊಡಗಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಜ್ಯೋತಿ ಅವರು 25 ವರ್ಷದವರಾಗಿದ್ದು, 62.8 ಸೆಂ.ಮೀ ಎತ್ತರ ಇದ್ದಾರೆ. ನಾಗ್ಪುರ್ ದ ನಿವಾಸಿಯಾದ ಜ್ಯೋತಿ ಆಮ್ಗೆ ತಮ್ಮ ಪೋಷಕರ ಜೊತೆಗೆ ಮತಗಟ್ಟೆಗೆ ಆಗಮಿಸಿದರು. ಈ ವೇಳೆ ಅಲ್ಲಿ ಸೇರಿದ್ದ ಜನರು ಅವರನ್ನು ಸಂತೋಷದಿಂದ ಸ್ವಾಗತಿಸಿದರು. ಅಧಿಕಾರಿಗಳು ಕೂಡ ಜವಾಬ್ದಾರಿ ಮೆರೆದ ಜ್ಯೋತಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2011ರಲ್ಲಿ ಜ್ಯೋತಿ ಅವರನ್ನು ವಿಶ್ವದ ಕುಬ್ಜ ಮಹಿಳೆ ಎಂಬುದಾಗಿ ಗಿನ್ನಿಸ್ ಸಂಸ್ಥೆ ಪ್ರಕಟಿಸಿತು.