ಕೋಲ್ಕತ್ತಾ: ಡೇವಿಡ್ ಮಿಲ್ಲರ್ (David Miller) ಜವಾಬ್ದಾರಿಯುತ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) ತಂಡ 49.4 ಓವರ್‌ಗಳಲ್ಲಿ 212 ರನ್ ಗಳಿಸಿದ್ದು, ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 213 ರನ್‌ಗಳ ಸುಲಭ ಗುರಿ ನೀಡಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಆಸ್ಟ್ರೇಲಿಯಾ (Australia) ಬೌಲರ್‌ಗಳ ಮಾರಕ ದಾಳಿಗೆ ನಲುಗಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹೀನಾಯ ಪ್ರದರ್ಶನ ತೋರಿ ಪೆವಿಲಿಯನ್ ಸೇರಿಕೊಂಡರು.
Advertisement
Advertisement
ಪಂದ್ಯದ ಆರಂಭದಿಂದಲೂ ಒಂದು ಅರ್ಧಶತಕವನ್ನೂ ಗಳಿಸದ ನಾಯಕ ತೆಂಬಾ ಬವುಮಾ ಶೂನ್ಯಕ್ಕೆ ಔಟಾಗಿ ನಿರ್ಮಿಸಿದರು. ಈ ಬೆನ್ನಲ್ಲೇ ಲೀಗ್ ಸುತ್ತಿನಲ್ಲಿ 4 ಶತಕ ಸಿಡಿಸಿ ಮಿಂಚಿದ್ದ ಕ್ವಿಂಟನ್ ಡಿಕಾಕ್ (Quinton de Kock) ಕೇವಲ 3 ರನ್‌ಗಳಿಗೆ, ರಾಸಿ ವಾನ್ ಡೇರ್ ಡುಸ್ಸೆನ್ 6 ರನ್ ಮತ್ತು ಏಡನ್ ಮಾರ್ಕ್ರಮ್ 10 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. 11.5 ಓವರ್‌ಗಳಾದರೂ ಕೇವಲ 24 ರನ್ ಗಳಿಸಿದ ದಕ್ಷಿಣ ಆಫ್ರಿಕಾ ತಂಡ ಪ್ರಮುಖ 4 ವಿಕೆಟ್‌ಗಳನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.
Advertisement
Advertisement
ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ (Heinrich Klaasen) ಮತ್ತು ಡೇವಿಡ್ ಮಿಲ್ಲರ್ (David Miller) ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. 113 ಎಸೆತಗಳಲ್ಲಿ ಈ ಜೋಡಿ 95 ರನ್‌ಗಳ ಜೊತೆಯಾಟ ನೀಡಿತು. ಅಷ್ಟರಲ್ಲೇ ಟ್ರಾವಿಸ್ ಹೆಡ್ ಸ್ಪಿನ್ ದಾಳಿಗೆ ಹೆನ್ರಿಚ್ ಕ್ಲಾಸೆನ್ ವಿಕೆಟ್ ಒಪ್ಪಿಸಿದರು. ಆ ಬಳಿಕ ಡೇವಿಡ್ ಮಿಲ್ಲರ್ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ಕೊನೆಯವರೆಗೂ ಹೋರಾಡಿದ ಮಿಲ್ಲರ್ 101 ರನ್ (5 ಸಿಕ್ಸರ್, 8 ಬೌಂಡರಿ) ಸಿಡಿಸಿದರು. ಇದರಿಂದಾಗಿ ದಕ್ಷಣ ಆಫ್ರಿಕಾ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಇದರ ಹೊರತಾಗಿ ಜೆರಾಲ್ಡ್ ಕೋಟ್ಜಿ 19 ರನ್, ಕೇಶವ್ ಮಹಾರಾಜ್ 4 ರನ್, ಕಾಗಿಸೋ ರಬಾಡ, 10 ರನ್, ತಬ್ರೈಜ್ ಶಮ್ಸಿ 1 ರನ್ ಗಳಿಸಿದರು. ವೈಡ್ ನೋಬಾಲ್‌ನಿಂದ ತಂಡಕ್ಕೆ ಹೆಚ್ಚುವರಿ 11 ರನ್ ಸೇರ್ಪಡೆಯಾಯಿತು.
ಹರಿಣರ ವಿರುದ್ಧ ಮಾರಕ ದಾಳಿ ನಡೆಸಿದ ಆಸೀಸ್ ಪರ ಮಿಚೆಲ್ ಸ್ಟಾರ್ಕ್ (Mitchell Starc) ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಜೋಶ್ ಹ್ಯಾಜಲ್ವುಡ್ ಮತ್ತು ಟ್ರಾವಿಸ್ ಹೆಡ್ ತಲಾ 2 ವಿಕೆಟ್ ಪಡೆದು ಮಿಂಚಿದರು.