ವಿಶ್ವಕಪ್‌ ಕ್ರಿಕೆಟ್‌ – ಸೂಪರ್‌ ಓವರ್‌ ಟೈ ಆದ್ರೆ ಬೌಂಡರಿಯನ್ನು ಪರಿಗಣಿಸಲಾಗುತ್ತಾ? 2019ರಲ್ಲಿ ಏನಾಗಿತ್ತು?

Public TV
3 Min Read
england won 2019 world cup cricket 3

ಅಹಮಾದಾಬಾದ್‌: ವಿಶ್ವಕಪ್‌ ಕ್ರಿಕೆಟ್‌ (World Cup Cricket) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ತಂಡಗಳು ಅ‍ಭ್ಯಾಸ ಪಂದ್ಯವನ್ನು ಆಡುತ್ತಿದೆ. ಭಾರತದಲ್ಲಿ (India) ಈ ಟೂರ್ನಿ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೂಪರ್‌ ಓವರ್‌ನಲ್ಲಿ (Super Over) ಟೈ ಆದರೆ ಫಲಿತಾಂಶವನ್ನು ಹೇಗೆ ನಿರ್ಧಾರ ಮಾಡಲಾಗುತ್ತದೆ? ಬೌಂಡರಿಯನ್ನು ಪರಿಗಣನೆ ಮಾಡಲಾಗುತ್ತಾ? – ಈ ರೀತಿಯ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟುವುದು ಸಹಜ.

ಈ ಪ್ರಶ್ನೆ ಹುಟ್ಟಲು ಕಾರಣವಿದೆ. ಇಂಗ್ಲೆಂಡ್‌ (England) ಮತ್ತು ನ್ಯೂಜಿಲೆಂಡ್‌ (New Zealand) ನಡುವೆ 2019ರಲ್ಲಿ ನಡೆದ ಫೈನಲ್‌ ಪಂದ್ಯ ಟೈ ಆಗಿತ್ತು. ನಂತರ ಸೂಪರ್‌ ಓವರ್‌ನಲ್ಲೂ ಪಂದ್ಯ ಟೈ ಆಯ್ತು. ಟೈನಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್‌ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

england won 2019 world cup cricket 2

ಐಸಿಸಿಯ ಈ ನಿಯಮ ಬಹಳ ಚರ್ಚೆಗೆ ಗ್ರಾಸವಾಗಿತ್ತು. ನೆಟ್ಟಿಗರ ತರಾಟೆಯ ನಂತರ ಎಚ್ಚೆತ್ತುಕೊಂಡ ಐಸಿಸಿ ನಿಯಮ ಬದಲಾವಣೆ ಮಾಡಿದ್ದು ಸೂಪರ್‌ ಓವರ್‌ ಪಂದ್ಯ ಟೈ ಆದರೂ ಮತ್ತೆ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಆ ಸೂಪರ್‌ ಓವರ್‌ ಟೈ ಆದರೂ ಮತ್ತೆ ಆಡಿಸಲಾಗುತ್ತದೆ. ಅಂತಿಮ ಫಲಿತಾಂಶ ಬರುವರೆಗೂ ಸೂಪರ್‌ ಓವರ್‌ ನಡೆಯುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ಬೌಂಡರಿಯನ್ನು ಪರಿಗಣಿಸಿ ಫಲಿತಾಂಶ ಪ್ರಕಟವಾಗುವುದಿಲ್ಲ.  ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ ಅಲ್ಲ, ವಿಶ್ವ ಟೆರರ್‌ ಕಪ್‌ ಮಾಡ್ತೀವಿ – ಖಲಿಸ್ತಾನ್‌ ಉಗ್ರನಿಂದ ಬೆದರಿಕೆ

 

2019ರಲ್ಲಿ ಏನಾಗಿತ್ತು?
ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜುಲೈ 14 ರಂದು ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್‌ಗಳಲ್ಲಿ ಇಂಗ್ಲೆಂಡ್‍ಗೆ 241 ರನ್‍ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಕೊನೆಯ ಓವರಿನ ಮೂರನೇ ಎಸೆತದಲ್ಲಿ  ಬೆನ್‌ ಸ್ಟೋಕ್ಸ್‌ ಸಿಕ್ಸ್‌ ಹೊಡೆದರೆ 4ನೇ ಎಸೆತದಲ್ಲೂ 6ರನ್‌ ಬಂದಿತ್ತು. ಎರಡನೇ ರನ್‌ ಓಡುವ ವೇಳೆ  ಚೆಂಡು ಬೆನ್‌ ಸ್ಟೋಕ್ಸ್‌ ಬ್ಯಾಟ್‌ಗೆ ತಾಗಿ ಬೌಂಡರಿಗೆ ಹೋಗಿತ್ತು. ಇದು ಬಹಳ ವಿವಾದಕ್ಕೆ ಕಾರಣವಾಗಿತ್ತು. ಕೊನೆಯ ಎರಡು ಎಸೆತದಲ್ಲಿ ಸಿಂಗಲ್‌ ರನ್‌ ಬಂದ ಕಾರಣ ಪಂದ್ಯ ಟೈ ಆಗಿತ್ತು.

ಟೈ ಆದ ಕಾರಣ ಐಸಿಸಿ ನಿಯಮದಂತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಯಿತು. ಸೂಪರ್ ಓವರ್‌ನಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಬಟ್ಲರ್ ಮತ್ತು ಸ್ಟೋಕ್ಸ್ ಅವರು ತಲಾ ಒಂದೊಂದು ಬೌಡರಿ ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ 15 ರನ್‍ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಕೀವೀಸ್ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಅವರ ಬೌಲಿಂಗ್‌ ಭರ್ಜರಿ ಬ್ಯಾಟ್ ಬೀಸಿದರು. ನೀಶಮ್ ಅವರು ಒಂದು ಸಿಕ್ಸರ್ ಸಿಡಿಸಿ ಗೆಲ್ಲುವ ಭರವಸೆ ಮೂಡಿಸಿದರು.

 

ಕೊನೆಯ ಎಸೆತದಲ್ಲಿ ಗೆಲ್ಲಲು ನ್ಯೂಜಿಲೆಂಡ್‍ಗೆ 2 ರನ್ ಬೇಕಿತ್ತು. ಆಗ ಸ್ಟ್ರೈಕ್‍ನಲ್ಲಿ ಇದ್ದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಎಸೆದ ಎಸೆತದಲ್ಲಿ 2 ರನ್ ಕದಿಯಲು ವಿಫಲರಾದರು. ಜೋಫ್ರಾ ಅವರ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ತಳ್ಳಿದ ಗುಪ್ಟಿಲ್ ಎರಡು ರನ್ ಕದಿಯುವಲ್ಲಿ ಯಶಸ್ವಿಯಾಗಲಿಲ್ಲ. ರಾಯ್ ಅವರು ಎಸೆದ ಉತ್ತಮ ಥ್ರೋವನ್ನು ಬಟ್ಲರ್ ಹಿಡಿದು ರನೌಟ್‌ ಮಾಡಿದರು. ಈ ಮೂಲಕ ಸೂಪರ್ ಓವರ್ ಕೂಡ ಟೈ ಆಯ್ತು.

ಫೈನಲ್‍ನಲ್ಲಿ ಸೂಪರ್ ಓವರ್ ಕೂಡ ಟೈ ಆದ ಕಾರಣ ಐಸಿಸಿ ನಿಯಮದಂತೆ ಹೆಚ್ಚು ಬೌಂಡರಿ ಸಿಡಿಸಿದ ತಂಡಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಹೆಚ್ಚು ಬೌಂಡರಿ ಹೊಡೆದಿದ್ದ ಇಂಗ್ಲೆಂಡ್ ಗೆಲುವು ಸಾಧಿಸಿತು. ಈ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುತ್ತಿಕ್ಕಿತು. ಸತತ ಎರಡನೇ ಬಾರಿ ಫೈನಲ್‍ನಲ್ಲಿ ಸೋತ ನ್ಯೂಜಿಲೆಂಡ್ ದ್ವಿತೀಯಸ್ಥಾನಿಯಾಗಿ ನಿರ್ಗಮಿಸಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ 26 ಬೌಂಡರಿ ಹೊಡೆದಿದ್ದರೆ ನ್ಯೂಜಿಲೆಂಡ್‌ 17 ಬೌಂಡರಿ ಹೊಡೆದಿತ್ತು.

 

Web Stories

Share This Article