ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ (ICC World Cup) ಟೂರ್ನಿಯೂ ಅತ್ಯಂತ ವಿಶೇಷವಾಗಿದ್ದು, ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳು ಸಿಡಿಯುತ್ತಲೇ ಇವೆ. ಆರಂಭಿಕ ಪಂದ್ಯದಲ್ಲೇ ಹಾಲಿಚಾಂಪಿಯನ್ಸ್ ಇಂಗ್ಲೆಂಡ್ (England) ತಂಡವನ್ನು ಬಗ್ಗು ಬಡಿದಿದ್ದ ಕಿವೀಸ್ ಚೊಚ್ಚಲ ಪಂದ್ಯದಲ್ಲೇ ದಾಖಲೆ ಸೃಷ್ಟಿಸಿತ್ತು.
ಕಿವೀಸ್ ಆಟಗಾರರಾದ ಡಿವೋನ್ ಕಾನ್ವೆ ಮತ್ತು ರಚಿನ್ ರವೀಂದ್ರ 211 ಎಸೆತಗಳಲ್ಲಿ 273 ರನ್ ಜೊತೆಯಾಟ ನೀಡುವ ಮೂಲಕ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ದಾಖಲೆಯನ್ನ ಉಡೀಸ್ ಮಾಡಿದ್ದರು. ಅಷ್ಟೇ ಅಲ್ಲ ರಚಿನ್ ರವೀಂದ್ರ ಚೊಚ್ಚಲ ವಿಶ್ವಕಪ್ನಲ್ಲೇ ಶತಕ ಸಿಡಿಸಿದ ವಿಶ್ವದ 16ನೇ ಆಟಗಾರ ಸಹ ಎನಿಸಿಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 11 ಆಟಗಾರರೂ ಮೊದಲ ಬಾರಿಗೆ ಎರಡಂಕಿಯ ಸ್ಕೋರ್ ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.
Advertisement
Advertisement
ಆದ್ರೆ ಶನಿವಾರ ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡವು ವಿಶ್ವದಾಖಲೆಗಳ ಸುರಿಮಳೆಗೈದಿತು. ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಏಡನ್ ಮಾರ್ಕ್ರಮ್ (Adien Markram) ಅತ್ಯಂತ ವೇಗದ ಶತಕ ಸಿಡಿಸಿ 12 ವರ್ಷಗಳ ಹಳೆಯ ದಾಖಲೆಯನ್ನ ಉಡೀಸ್ ಮಾಡಿದರು. ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ ಕೇವಲ 5 ವಿಕೆಟ್ ನಷ್ಟಕ್ಕೆ 428 ರನ್ ಬಾರಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಅತಿಹೆಚ್ಚು ರನ್ ಸಿಡಿಸಿದ ವಿಶ್ವದಾಖಲೆಯನ್ನೂ ಮಾಡಿತು.
Advertisement
Advertisement
ಟಾಸ್ ಸೋತು ಲಂಕಾ ವಿರುದ್ಧ ಮೊದಲು ಕ್ರೀಸ್‌ಗಿಳಿಸಿದ ದಕ್ಷಿಣ ಆಫ್ರಿಕಾ (South Africa) ಪರ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಹಾಗೂ ರಾಸಿ ವಾನ್ ಡೆರ್ ಡುಸೆನ್ ಇಬ್ಬರೂ ಭರ್ಜರಿ ಶತಕ ಸಿಡಿಸಿದರು. ಈ ಜೋಡಿ ವಿಕೆಟ್ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡೆನ್ ಮಾರ್ಕ್ರಮ್, ಲಂಕಾ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ ಮಾರ್ಕ್ರಮ್, 49 ಎಸೆತಗಳಲ್ಲೇ ಶತಕ ಸಿಡಿಸಿದರು. ಆ ಮೂಲಕ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ 50 ಎಸೆತಗಳಲ್ಲಿ ಶತಕ ಸಿಡಿಸಿದ್ದ ಐರ್ಲೆಂಡ್ ಆಟಗಾರ ಕೆವಿನ್ ಓಬ್ರಿಯಾನ್ ದಾಖಲೆಯನ್ನ ನುಚ್ಚು ನೂರು ಮಾಡಿದರು. ಜೊತೆಗೆ ವೇಗದ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಒಟ್ಟಾರೆ 54 ಎಸೆತಗಳನ್ನು ಎದುರಿಸಿದ ಮಾರ್ಕ್ರಮ್ 14 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳೊಂದಿಗೆ 106 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು.
2015ರ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿಡಿ ವಿಲಿಯರ್ಸ್ 31 ಎಸೆತಗಳಲ್ಲೇ ಶತಕ ಸಿಡಿಸಿರುವುದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್
ಏಕದಿನ ವಿಶ್ವಕಪ್‌ನಲ್ಲಿ ಮೂಡಿಬಂದ ವೇಗದ ಶತಕಗಳು
* ಏಡೆನ್ ಮಾರ್ಕ್ರಮ್ – ದಕ್ಷಿಣ ಆಫ್ರಿಕಾ- 49 ಎಸೆತಗಳು- ಶ್ರೀಲಂಕಾ ವಿರುದ್ಧ – ಹೊಸದಿಲ್ಲಿ- 2023
* ಕೆವಿನ್ ಓಬ್ರಿಯನ್- ಐರ್ಲೆಂಡ್- 50 ಎಸೆತಗಳು- ಇಂಗ್ಲೆಂಡ್ ವಿರುದ್ಧ-ಬೆಂಗಳೂರು- 2011
* ಗ್ಲೆನ್ ಮ್ಯಾಕ್ಸ್‌ವೆಲ್- ಆಸ್ಟ್ರೇಲಿಯಾ- 51 ಎಸೆತಗಳು- ಶ್ರೀಲಂಕಾ ವಿರುದ್ಧ- ಸಿಡ್ನಿ- 2015
* ಎಬಿ ಡಿ ವಿಲಿಯರ್ಸ್- ದಕ್ಷಿಣ ಆಫ್ರಿಕಾ- 52 ಎಸೆತಗಳು- ವೆಸ್ಟ್ ಇಂಡೀಸ್ ವಿರುದ್ಧ- ಸಿಡ್ನಿ- 2015
* ಐಯಾನ್ ಮಾರ್ಗನ್- ಇಂಗ್ಲೆಂಡ್- 57 ಎಸೆತಗಳು- ಆಫಾಘಾನಿಸ್ತಾನ ವಿರುದ್ಧ- ಓಲ್ಡ್ ಟಾಫರ್ಡ್- 2019
ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು
* 31 ಎಸೆತಗಳು – ಎಬಿಡಿ ವಿಲಿಯರ್ಸ್ – ವೆಸ್ಟ್ ಇಂಡೀಸ್ ವಿರುದ್ಧ- 2015
* 44 ಎಸೆತಗಳು- ಮಾರ್ಕ್ ಬೌಚರ್- ಜಿಂಬಾಬ್ವೆ ವಿರುದ್ಧ-2006
* 49 ಎಸೆತಗಳು- ಏಡೆನ್ ಮಾರ್ಕ್ರಮ್- ಶ್ರೀಲಂಕಾ ವಿರುದ್ಧ- 2023
* 52 ಎಸೆತಗಳು- ಎಬಿಡಿ ವಿಲಿಯರ್ಸ್- ವೆಸ್ಟ್ ಇಂಡೀಸ್ ವಿರುದ್ಧ- 2015
Web Stories