World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್

Public TV
2 Min Read
BASAVARA BOMMAI HD KUMARASWAMY

ಬೆಂಗಳೂರು: ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ  (Narendra Modi Stadium Ahemadabad) ಇಂದು ನಡೆಯುವ ಫೈನಲ್ ಕ್ರಿಕೆಟ್ ಪಂದ್ಯ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದು, ಎಲ್ಲೆಡೆಯಿಂದಲೂ ಟೀಂ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಂತೆಯೇ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಹೆಚ್.ಡಿ ಕುಮಾರಸ್ವಾಮಿ ಕೂಡ ವಿಶ್ ಮಾಡಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ಭಾರತ ಹಾಗೂ ಆಸ್ಟ್ರೇಲಿಯಾ (IND Vs AUS) ನಡುವಿನ ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯ ನೋಡಲು ಇಡೀ ಜಗತ್ತಿನ ಕ್ರಿಕೆಟ್ (Cricket) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಾನೂ ಫೈನಲ್ ಪಂದ್ಯ ನೋಡಲು ಕಾತುರನಾಗಿದ್ದೇನೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈ ಬಾರಿ ವಿಶ್ವ ಕಪ್ ಗೆಲ್ಲುವ ಫೆವರಿಟ್ ತಂಡವಾಗಿದೆ.

ರನ್ ಮಷಿನ್ ವಿರಾಟ್ ಕೋಹ್ಲಿಯ ರನ್ ಹೊಳೆ, ಮೊಹಮದ್ ಶಮಿಯ ಬೌಲಿಂಗ್ ದಾಳಿ, ಸಂಘಟಿತ ಹೋರಾಟದಿಂದ ಭಾರತ ತಂಡ ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುತ್ತದೆ ಎನ್ನುವ ಅಚಲ ವಿಶ್ವಾಸ ನನಗಿದೆ. ಭಾರತ ಕ್ರಿಕೆಟ್ ತಂಡ ಜಯಶಾಲಿಯಾಗಿ ಮೂರನೇ ಬಾರಿ ಕ್ರಿಕೆಟ್ ಲೋಕದ ವಿಶ್ವ ಚಾಂಪಿಯನ್ ಆಗಲಿ ಎಂದು ಶುಭ ಹಾರೈಸುತ್ತೇನೆ. ಗುಡ್ ಲಕ್ ಟೀಮ್ ಇಂಡಿಯಾ ಎಂದು ಬೊಮ್ಮಾಯಿ (Basavaraj Bommai) ಬರೆದುಕೊಂಡಿದ್ದಾರೆ.

ವಿಶ್ವಕಪ್ ಸರಣಿಯಲ್ಲಿ ಈವರೆಗೆ ಎಲ್ಲ ಪಂದ್ಯಗಳನ್ನು ಜಯಿಸಿ ಅಜೇಯವಾಗಿರುವ ಭಾರತ ತಂಡ ವಿಶ್ವಕಪ್ ಗೆಲ್ಲಬೇಕು. ನಮ್ಮೆಲ್ಲರ ಹಾರೈಕೆ, ಕನಸುಗಳೆಲ್ಲವೂ ಟೀಂ ಇಂಡಿಯಾ ಜೊತೆಯಲ್ಲಿವೆ. ಭಾರತ ಗೆದ್ದು ಬರಲಿ. ಎಲ್ಲರೂ ಹಾರೈಸೋಣ, ಪ್ರಾರ್ಥಿಸೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (hD Kumaraswamy) ಶುಭಹಾರೈಸಿದ್ದಾರೆ. ಇದನ್ನೂ ಓದಿ: ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ

ಇತ್ತ ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯೇ ಎಕ್ಸ್ ಮಾಡಿದ್ದು, ನಾಳಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಭಾರತೀಯರ ಗೆಲುವನ್ನು ಸಂಭ್ರಮಿಸಲು ನಾನು ಎಲ್ಲರಂತೆ ಕಾತುರನಾಗಿದ್ದೇನೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ನಮ್ಮದು ಒಂದು ಪರಿಪೂರ್ಣ ತಂಡವಾಗಿರುವುದರಿಂದ ಈ ಬಾರಿಯ ವಿಶ್ವಕಪ್ ಭಾರತದ ಮಡಿಲು ಸೇರುವುದು ನಿಶ್ಚಿತ ಎಂದಿದ್ದಾರೆ.

ಒಟ್ಟಿನಲ್ಲಿ ವಿಶ್ವಕಪ್ ಮಹಾಸಮರಕ್ಕೆ ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ, ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ.

Share This Article