ವಿಶ್ವಕಪ್ 2019 : ಇಂಡೋ, ಪಾಕ್ ಕದನ – ಟೀಂ ಇಂಡಿಯಾ ಗೆಲ್ಲುವ ಫೇವರಿಟ್

Public TV
2 Min Read
ind

ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದು, ಇತ್ತಂಡಗಳು ಗೆಲುವಿನ ಲೆಕ್ಕಾಚಾರಗಳನ್ನು ಆರಂಭಿಸಿವೆ.

ಏಷ್ಯಾದ ಎರಡು ರಾಷ್ಟ್ರಗಳ ಪಂದ್ಯವನ್ನ ವಿಶ್ವ ಕ್ರಿಕೆಟ್ ಅಭಿಮಾನಿಗಳು ಕೂಡ ಕಣ್ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ. ಎರಡು ತಂಡಗಳು ದ್ವಿಪಕ್ಷೀಯ ಸರಣಿಗಳನ್ನು ಆಡದಿರುವುದರಿಂದ ನಾಳೆಯ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಸಂದರ್ಭದಲ್ಲಿ ಎರಡು ತಂಡಗಳ ಬಲಾಬಲ ನೋಡುವುದಾದರೆ ಪಂದ್ಯದಲ್ಲಿ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ಆಗಿದೆ.

2015ರ ವಿಶ್ವಕಪ್ ಬಳಿಕ ಪಾಕಿಸ್ತಾನ ಮತ್ತು ಭಾರತದ ತಂಡಗಳು ನಾಲ್ಕು ಭಾರೀ ಮಾತ್ರ ಮುಖಾಮುಖಿಯಾಗಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಎರಡು ತಂಡಗಳು 131 ಪಂದ್ಯಗಳನ್ನು ಆಡಿದ್ದು, ಭಾರತ 54 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಪಾಕ್ 73 ಪಂದ್ಯಗಳಲ್ಲಿ ಗೆದ್ದಿದೆ. 1978 ರಲ್ಲಿ ಭಾರತ ಹಾಗೂ ಪಾಕಿಸ್ತಾನ ಮೊದಲ ಏಕದಿನ ಟೂರ್ನಿಯನ್ನ ಆಡಿದ್ದವು.

ಇತ್ತೀಚಿನ ಪಂದ್ಯಗಳ ಫಲಿತಾಂಶವನ್ನು ಪರಿಗಣಿಸುವುದಾದರೆ 2006ರ ಬಳಿಕ ಎರಡು ತಂಡಗಳು 30 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19 ರಲ್ಲಿ ಭಾರತ, 11 ರಲ್ಲಿ ಪಾಕ್ ಗೆಲುವು ಪಡೆದಿದೆ. ಭಾರತ ಹಾಗೂ ಪಾಕ್ ನಡುವ ಅಂತಿಮ ದ್ವಿಪಕ್ಷೀಯ ಕ್ರಿಕೆಟ್ ಸರಣಿ 2012-13 ರಲ್ಲಿ ನಡೆದಿತ್ತು.

ಉಳಿದಂತೆ 2015ರ ವಿಶ್ವಕಪ್ ಬಳಿಕ ನಡೆದ 4 ಪಂದ್ಯಗಳಲ್ಲಿ ಭಾರತ 3 ರಲ್ಲಿ ಗೆಲುವು ಪಡೆದಿದೆ. 2017ರ ಚಾಂಪಿಯನ್ಸ್ ಟ್ರೋಫಿಯ ಬಾರ್ಮಿಂಗ್‍ಹ್ಯಾಮ್ ಪಂದ್ಯದಲ್ಲಿ ಭಾರತ 124 ರನ್ ಅಂತರದಲ್ಲಿ ಪಾಕ್ ವಿರುದ್ಧ ಗೆಲುವು ಪಡೆದಿತ್ತು. ಪಂದ್ಯದಲ್ಲಿ ರೋಹಿತ್ ಶರ್ಮಾ, ಧವನ್, ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರೆ, ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ತಂಡದ ಮೊತ್ತ 319 ರನ್ ಆಗಲು ಸಹಕಾರಿಯಾಗಿತ್ತು. ಡಿಎಲ್‍ಎಸ್ ನಿಯಮಗಳ ಅನ್ವಯ ಪಾಕ್ 289 ರನ್ ಟಾರ್ಗೆಟ್ ಪಡೆದರು ಕೇವಲ 164 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲುಂಡಿತ್ತು. ಆದರೆ ಟೂರ್ನಿಯ ಫೈನಲ್‍ನಲ್ಲಿ ಭಾರತ 180 ರನ್ ಗಳಿಂದ ಸೋಲುಂಡಿತ್ತು. ಆ ಬಳಿಕ 2018 ರಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್‍ನಲ್ಲಿ ಕೊಹ್ಲಿ ಅನುಪಸ್ಥಿತಿ ನಡುವೆಯೂ ಭಾರತ ಗೆದ್ದು ಬೀಗಿತ್ತು.

2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡಿರುವ 3 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗೆಲುವು ಪಡೆದಿದ್ದರೆ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳಿಂದ ಗೆದ್ದು ಬೀಗಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮಳೆಗೆ ರದ್ದಾಗಿದ್ದ ಕಾರಣ ಅಂಕಪಟ್ಟಿಯಲ್ಲಿ 5 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದೆ.

ind vs pak

ಇತ್ತ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಆಡಿರುವ ಪಾಕಿಸ್ತಾನ 2 ರಲ್ಲಿ ಸೋತು 1 ಪಂದ್ಯದಲ್ಲಿ ಗೆಲುವು ಪಡೆದಿದ್ದರೆ, ಶ್ರೀಲಂಕಾ ವಿರುದ್ಧ ಪಂದ್ಯ ರದ್ದಾಗಿದೆ. 4 ಪಂದ್ಯಗಳಿಂದ 3 ಅಂಕಗಳನ್ನು ಪಡೆದಿರುವ ಪಾಕ್ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದೆ.

ನಾಳಿನ ಪಂದ್ಯದ ತಂಡದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ತಂಡ ಬಲವಾಗಿದ್ದರೆ, ಧವನ್ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ಸಮಸ್ಯೆಯಾಗಿದೆ. ಧವನ್ ಸ್ಥಾನದಲ್ಲಿ ಆರಂಭಿಕನಾಗಿ ರಾಹುಲ್ ಕಣಕ್ಕೆ ಇಳಿಯುವುದು ಖಚಿತವಾಗಿದ್ದು, ನಂ.4 ರಲ್ಲಿ ಯಾರು ಬ್ಯಾಟ್ ನಡೆಸಲಿದ್ದಾರೆ ಎಂಬ ಕುತೂಹಲವಿದೆ. ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ ರಾಹುಲ್ ಹೆಚ್ಚಿನ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವಿ, ಬುಮ್ರಾ ಭಾರತದ ಶಕ್ತಿಯಾಗಿದ್ದರೆ, ಚಹಲ್ ಕಮಲ್ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಇದರೊಂದಿಗೆ ಕುಲ್ದೀಪ್ ಯಾದವ್ ಸಾಥ್ ನೀಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *