ಮ್ಯಾಂಚೆಸ್ಟರ್: ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರ್ಯಾಫೋರ್ಡ್ ಕ್ರೀಡಾಂಗಣ ಸಿದ್ಧವಾಗಿದೆ. ಆದರೆ ಅಭಿಮಾನಿಗಳ ಕುತೂಹಲಕ್ಕೆ ಮಳೆರಾಯ ಅಡ್ಡಿಪಡಿಸುವ ಆತಂಕ ಸೃಷ್ಟಿಯಾಗಿದೆ.
ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಇದಕ್ಕೆ ಮಳೆರಾಯ ಅಡ್ಡಿಪಡಿಸಲಿದ್ದಾನೆ ಎಂಬ ಆತಂಕ ಶುರುವಾಗಿದೆ. ಮ್ಯಾಂಚೆಸ್ಟರ್ ನಲ್ಲಿ ಕಳೆದ 4 ದಿನಗಳಿಂದ ಮಳೆಯಾಗುತ್ತಿತ್ತು. ಆದರೆ ಶುಕ್ರವಾರ ಮೋಡಗಳು ಸರಿದು ಮಧ್ಯಾಹ್ನದ ವರೆಗೂ ಸೂರ್ಯ ಕಾಣಿಸಿಕೊಂಡಿದ್ದ. ಆದರೆ ಸಂಜೆ ವೇಳೆಗೆ ಮತ್ತೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಇಂದು ಮಳೆ ಇಲ್ಲದ ಕಾರಣ ಟೀಂ ಇಂಡಿಯಾ ಮಧ್ಯಾಹ್ನ 1 ಗಂಟೆವರೆಗೂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತ್ತು. ಮಧ್ಯಾಹ್ನದ ಬಳಿಕ ಪಾಕ್ ತಂಡ ಅಭ್ಯಾಸಕ್ಕಿಳಿದಿತ್ತು.
????????#TeamIndia all set for the biggie tomorrow ????????????#CWC19 pic.twitter.com/yf3aDSqoAr
— BCCI (@BCCI) June 15, 2019
ಟೂರ್ನಿಯಲ್ಲಿ ಭಾರತ, ನ್ಯೂಜಿಲ್ಯಾಂಡ್ ಪಂದ್ಯ ಸೇರಿ ಇದುವರೆಗೂ ನಾಲ್ಕು ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ. ಪಾಕಿಸ್ತಾನ-ಶ್ರೀಲಂಕಾ, ಬಾಂಗ್ಲಾದೇಶ-ಶ್ರೀಲಂಕಾ, ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಪಂದ್ಯಗಳು ರದ್ದಾಗಿತ್ತು. ಶ್ರೀಲಂಕಾದ ಎರಡು ಪಂದ್ಯಗಳು ಮಳೆಯಿಂದಾಗಿಯೇ ರದ್ದಾಗಿರುವ ಕಾರಣ ತಂಡ ಸೆಮಿ ಫೈನಲ್ ತಲುಪುದರ ಮೇಲೆ ಪರಿಣಾಮ ಬೀರಲಿದೆ.
ಹವಾಮಾನ ವರದಿ ಪ್ರಕಾರ ಮುಂಜಾನೆ ಅಲ್ಪ ಮಳೆಯಾಗುವ ಸಾಧ್ಯತೆ ಇದ್ದು, ಆ ಬಳಿಕ ಸೂರ್ಯ ಬಂದರು ಪಂದ್ಯದ ಸೆಕೆಂಡ್ ಆಫ್‍ಗೆ ಮತ್ತೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ. ಈ ವರದಿಯ ಅನ್ವಯ ಪಂದ್ಯ ಸಂರ್ಪೂಣ 50 ಓವರ್ ನಡೆಯುವ ಅವಕಾಶ 50-50 ಎನ್ನಲಾಗಿದೆ.
ಇಂಗ್ಲೆಂಡ್ ಕಾಲಮಾನದ ಪ್ರಕಾರ ಪಂದ್ಯ ನಾಳೆ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ. ಟೂರ್ನಿಯಲ್ಲಿ ಮಳೆಯಿಂದ ಪಂದ್ಯ ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟೂರ್ನಿಯ ಆಯೋಜನೆ ಹೊಣೆ ಹೊತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಉತ್ತಮ ವ್ಯವಸ್ಥೆ ಮಾಡಿಲ್ಲ ಎಂಬ ಟೀಕೆ ಕೇಳಿ ಬಂದಿದೆ.