ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಳಕೆ ಮಾಡಲಾಗುತ್ತಿರುವ ಎಲ್‍ಇಡಿ ‘ಝಿಂಗ್ ಬೇಲ್ಸ್’ ಬಗ್ಗೆ ಹಲವು ತಂಡಗಳ ನಾಯಕರು ಹಾಗೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಆದರೆ ಟೂರ್ನಿಯ ಮಧ್ಯದಲ್ಲಿ ಬೇಲ್ಸ್ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಭಾನುವಾರದಂದು ಐಸಿಸಿಗೆ ಬೇಲ್ಸ್ ಬದಲಿಸುವಂತೆ ಮನವಿ ಮಾಡಿದ್ದರು. ಆದರೆ ಇಬ್ಬರ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಟೂರ್ನಿಯಲ್ಲಿ ಈಗಾಗಲೇ ಹಲವು ಬಾರಿ ಚೆಂಡು ವಿಕೆಟ್ ಗಳಿಗೆ ಬಡಿದರೂ ಕೂಡ ಬೇಲ್ಸ್ ಹಾರದ ಪರಿಣಾಮ ಬ್ಯಾಟ್ಸ್ ಮನ್ ಔಟಾಗದೆ ಉಳಿದಿದ್ದರು. ಅದರಲ್ಲೂ ಆಸ್ಟ್ರೇಲಿಯಾ ಪಂದ್ಯದಲ್ಲಿ ಇದೇ ಘಟನೆ ಹಲವು ಬಾರಿ ಪುನಾರವರ್ತನೆ ಆಗಿತ್ತು.
ಟೂರ್ನಿಯ ಮಧ್ಯದಲ್ಲಿ ಬೇಲ್ಸ್‍ಗಳನ್ನು ಬದಲಿಸಲು ಸಾಧ್ಯವಿಲ್ಲ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳಿಗೂ ಒಂದೇ ಸಲಕರಣೆಗಳನ್ನು ನೀಡಲಾಗುತ್ತದೆ. 48 ಪಂದ್ಯಗಳಿಗೂ ಇದೇ ನಿಯಮ ಅನ್ವಯಿಸಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿತ್ತು.
ಇದುವರೆಗೂ ಟೂರ್ನಿಯಲ್ಲಿ 10 ಬಾರಿ ಬಾಲ್ ವಿಕೆಟ್‍ಗಳಿಗೆ ತಾಗಿದ್ದರು ಕೂಡ ಬೇಲ್ಸ್ ಹಾರದ ಪರಿಣಾಮ ಆಟಗಾರರು ನಿರಾಸೆ ಅನುಭವಿಸಿದ್ದರು. ನ್ಯೂಜಿಲೆಂಡ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಶ್ರೀಲಂಕಾ ತಂಡದ ಕರುಣರತ್ನೆ ಬೌಲ್ಡ್ ಆಗಿದ್ದರು, ಬೇಲ್ಸ್ ಬಿದ್ದಿರಲಿಲ್ಲ. ಅಲ್ಲದೇ ಆಸೀಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಎಸೆತದಲ್ಲಿ ವಾರ್ನರ್ ಬೌಲ್ಡ್ ಆಗಿದ್ದರು ಬೇಲ್ಸ್ ಹಾರಿರಲಿಲ್ಲ. ಪರಿಣಾಮ ಬೇಲ್ಸ್ ಗಳ ತೂಕದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಆದರೆ ಈ ಹಿಂದಿನ ವಿಶ್ವಕಪ್‍ಗಳಲ್ಲಿ ಬಳಸಿದ್ದ ಹಳೆಯ ಬೇಲ್ಸ್ ಗಳನ್ನು ಮತ್ತೆ ಬಳಸಲು ಆಗುವುದಿಲ್ಲ ಎಂದು ಐಸಿಸಿ ತಿಳಿಸಿದೆ.
ಐಸಿಸಿಯ ಈ ಬೇಲ್ಸ್ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.
@cricketaakash The zing bails are fast becoming a night mare for bowlers. This needs to be changed to provide a better balance between bat and ball.#CWC19 pic.twitter.com/6wpGpT8j0O
— Anurag Trivedi (@Thatcricketguy2) June 9, 2019
Zing Bails #CWC19 #IndvAus pic.twitter.com/DGB31gnBzW
— Aakash Chopra (@cricketaakash) June 9, 2019