ನವದೆಹಲಿ: ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಾಯೋರ್‍ಜಿವಾ ಪ್ರಧಾನಿ ನರೇಂದ್ರ ಮೋದಿ ಅವರ 500-1000 ಮುಖಬೆಲೆಯ ಹಳೆಯ ನೋಟುಗಳ ನಿಷೇಧ ನಿರ್ಧಾರವನ್ನು ಹೊಗಳಿದ್ದಾರೆ.
ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಕ್ರಿಸ್ಟಾಲಿನಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಆರಂಭದ ದಿನದಲ್ಲಿ ಈ ನಿರ್ಧಾರದಿಂದ ಸಮಸ್ಯೆಯಾದರೂ ಭವಿಷ್ಯದಲ್ಲಿ ಡಿಜಿಟಲ್ ಆರ್ಥಿಕತೆಯ ಮೂಲಕ ದೇಶಕ್ಕೆ ಒಳ್ಳೆದಾಗಲಿದೆ. ಭಾರತದ ಈ ನಡೆಯನ್ನು ಇತರ ದೇಶಗಳು ಕೂಡ ಅಧ್ಯಯನ ಮಾಡಲಿವೆ ಎಂದು ತಿಳಿಸಿದರು.
Advertisement
ಭ್ರಷ್ಟಾಚಾರ ತಡೆಗಟ್ಟಲು ತೆಗೆದುಕೊಂಡಿರುವ ನೋಟ್ ಬ್ಯಾನ್ ನಿರ್ಧಾರ ಭಾರತದ ಆರ್ಥಿಕತೆಯ ಮೇಲೆ ಉತ್ತಮ ಧನಾತ್ಮಕ ಪರಿಣಾಮ ಬೀರಲಿದೆ. ಇಲ್ಲಿನ ಬೆಳವಣಿಗೆ ಜಗತ್ತಿನ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಕಾರಣ ನಮಗೆ ಭಾರತವು ಮುಖ್ಯವಾಗುತ್ತದೆ ಎಂದು ಹೇಳಿದರು.
Advertisement
ನೋಟು ಬ್ಯಾನ್ ಆದ ಬಳಿಕ ದೇಶದ ಜಿಡಿಪಿ ಭಾರೀ ಕುಸಿಯಲಿದೆ ಎಂದು ಆರ್ಥಿಕ ಪಂಡಿತರು ವಿಶ್ಲೇಷಿಸಿದ್ದರು. ಆದರೆ ಅಕ್ಟೋಬರ್ ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಶೇ.7.0ರಷ್ಟು ದಾಖಲಿಸಿತ್ತು. ಈ ಮೂಲಕ ಆರ್ಥಿಕ ಅಭಿವೃದ್ಧಿ ದರದಲ್ಲಿ ವಿಶ್ವದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಭಾರತ ಮುಂದುವರಿದಿದೆ. ಈ ಅವಧಿಯಲ್ಲಿ ಚೀನಾ ಜಿಡಿಪಿ ದರ ಶೇ.6.8 ಸಾಧಿಸಿದ್ದು, ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.
Advertisement
ಮಂಗಳವಾರ ಕೇಂದ್ರಿಯ ಅಂಕಿ ಅಂಶ ಕಾರ್ಯಾಲಯ(ಸಿಎಸ್‍ಒ) ಜಿಡಿಪಿ ಮಾಹಿತಿಯನ್ನು ಬಿಡುಗಡೆ ಮಾಡಿ, 2017ರ ಮಾರ್ಚ್ ನಲ್ಲಿ ಅಂತ್ಯವಾಗುವ ಹಣಕಾಸು ವರ್ಷಕ್ಕೆ ಜಿಡಿಪಿ ದರ ಶೇ.7.1 ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಿದೆ.
Advertisement
2016-17 ಹಣಕಾಸು ವರ್ಷದ ಏಪ್ರಿಲ್- ಜೂನ್‍ನಲ್ಲಿ ಶೇ.7.2, ಜುಲೈ- ಸೆಪ್ಟೆಂಬರ್‍ನಲ್ಲಿ ಶೇ.7.4 ರಷ್ಟು ಜಿಡಿಪಿ ಪ್ರಗತಿ ಸಾಧಿಸಿತ್ತು.
ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಜಿಡಿಪಿ ಇಳಿಕೆಯಾಗಲಿದೆ ಎಂದು ಹೇಳಿತ್ತು. 2015 -16ರಲ್ಲಿ ಶೇ. 7.6 ರಷ್ಟಿದ್ದ ಜಿಡಿಪಿ ದರ 2016- 17ರಲ್ಲಿ ಶೇ 6.6 ರಷ್ಟು ಕಡಿಮೆ ಮಟ್ಟದಲ್ಲಿರಲಿದೆ ಎಂದು ಅದು ತಿಳಿಸಿತ್ತು.