ಕಠ್ಮಂಡು: ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ ಎಂದು ನೇಪಾಳದ ನೂತನ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ (Sushila Karki) ಹೇಳಿದ್ದಾರೆ.
ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಹೊಸ ಸಂಸತ್ತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುತ್ತೇವೆ. ನಿಮ್ಮ ಬೆಂಬಲವಿಲ್ಲದೆ ನಾವು ಯಶಸ್ವಿಯಾಗುವುದಿಲ್ಲ. ಕೆ.ಪಿ.ಶರ್ಮಾ ಓಲಿ (KP Sharma Oli) ಸರ್ಕಾರ ಉರುಳಿಸಿದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ‘ಜೆನ್-ಝಡ್’ ಪ್ರತಿಭಟನೆಗಳನ್ನು (Gen-Z Protests) ಶ್ಲಾಘಿಸಿದರು. ಅಲ್ಲದೇ ಆಂದೋಲನದ ಸಮಯದಲ್ಲಿ ಕೊಲ್ಲಲ್ಪಟ್ಟವರನ್ನು ‘ಹುತಾತ್ಮರು’ ಎಂದು ಗುರುತಿಸಲಾಗುವುದು ಎಂದು ಕರ್ಕಿ ಹೇಳಿದ್ದಾರೆ. ಪ್ರತಿ ಸಂತ್ರಸ್ತ ಕುಟುಂಬಗಳಿಗೆ 1 ಮಿಲಿಯನ್ ನೇಪಾಳಿ ರೂಪಾಯಿಗಳ ಪರಿಹಾರವನ್ನೂ ಘೋಷಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನ ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ – ಉತ್ತರ ಬಂಗಾಳ, ಭೂತಾನ್‌ನಲ್ಲೂ ಕಂಪನ
ಇನ್ನು, ನೇಪಾಳದಲ್ಲಿ ಸಿಲುಕಿದ್ದ 28 ಕನ್ನಡಿಗರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ನೇಪಾಳದ ಕರಾಳತೆಯನ್ನು ಕನ್ನಡಿಗರು ಪಬ್ಲಿಕ್ ಟಿವಿ ಮುಂದೆ ಬಿಚ್ಚಿಟ್ಟಿದ್ದಾರೆ. ಒಂದೊಂದು ಕ್ಷಣವೂ ಭಯಾನಕ, ಕಣ್ಣ ಮುಂದೆಯೇ ಸಾವಿನ ಸೂಚನೆಯಿತ್ತು. ಕನ್ನಡಿಗರಿದ್ದ ಬಸ್ಸನ್ನೇ ಕಿತ್ತುಕೊಂಡರು. ನಾಲ್ಕು ಕಿ.ಮೀ ನಡೆದುಕೊಂಡೇ ಬಂದೆವು. ನಡೆದುಕೊಂಡು ಬರುತ್ತಿದ್ದ ದಾರಿಯುದ್ದಕ್ಕೂ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ಬಂದಂತಾಗಿದೆ. ಕನ್ನಡಿಗರಿದ್ದ ಹೊಟೇಲ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಲು ಮುಂದಾಗಿದ್ದರು ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಸುಳಿವು ನೀಡಿದ್ರಾ ಸಿಎಂ?
ಸಂಕಷ್ಟಕ್ಕೆ ಸಿಲುಕಿದಾಗ ನಮ್ಮ ಸರ್ಕಾರದಿಂದಲೇ ಸ್ಪಂದನೆ ಸಿಗಲಿಲ್ಲ. ರಕ್ಷಣೆ ಮಾಡಲಿಲ್ಲ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೇಕಲ್ ಶಾಸಕ ಶಿವಣ್ಣ, ಸಚಿವ ರಾಮಲಿಂಗಾರೆಡ್ಡಿ ಮಾತ್ರ ಸ್ಪಂದಿಸಿದ್ರು ಎಂದು ಸರ್ಕಾರದ ವಿರುದ್ಧ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾಸಭೆಯಿಂದ ಗೊಂದಲ ಸೃಷ್ಟಿ: ಬೊಮ್ಮಾಯಿ