ಬಿಕ್ಕಿ ಬಿಕ್ಕಿ ಅತ್ತ ಶಫಾಲಿ ವರ್ಮಾ, ಸಂತೈಸಿದ ಹರ್ಮನ್ ಪ್ರೀತ್ – ವಿಡಿಯೋ ವೈರಲ್

Public TV
3 Min Read
Shafali Verma Main

ಮೆಲ್ಬರ್ನ್: ಮಹಿಳಾ ಟಿ20 ವಿಶ್ವಪಕ್‍ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡ ಬಳಿಕ ಟೀಂ ಇಂಡಿಯಾ ಆರಂಭಿಕ ಆಟಗಾರ್ತಿ 16ರ ಶಫಾಲಿ ವರ್ಮಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಶಫಾಲಿ ವರ್ಮಾ ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿದ್ದರು. ಆದರೆ ಟೂರ್ನಿಯುದ್ದಕ್ಕೂ ಅನುಭವಿ ಆಟಗಾರರಾಗಿದ್ದ ಸ್ಮೃತಿ  ಮಂದಾನ, ನಾಯಕಿ ಹರ್ಮನ್‍ಪ್ರೀತ್ ಕೌರ್ ವೈಫಲ್ಯ ತೋರುತ್ತಲೇ ಬಂದಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಶಫಾಲಿ ವರ್ಮಾ ಮತ್ತೆ ತಮ್ಮ ಸ್ಫೋಟಕ ಬ್ಯಾಟಿಂಗ್ ತೋರಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಕ್ರಿಕೆಟ್ ಅಭಿಮಾನಿಗಳಲ್ಲಿ ಇತ್ತು.

ಆಸ್ಟ್ರೇಲಿಯಾ 185 ರನ್‍ಗಳ ಬೃಹತ್ ಮೊತ್ತದ ಗುರಿ ನೀಡಿದ್ದರಿಂದ ಶಫಾಲಿ ವರ್ಮಾ ಟೀಂ ಇಂಡಿಯಾ ಬ್ಯಾಟಿಂಗ್ ಪಡೆಯ ಕೇಂದ್ರ ಬಿಂದುವಾಗಿ ಕಾಣಿಸಿದ್ದರು. ಈ ಮೊತ್ತವನ್ನು ಬೆನ್ನಟ್ಟಲು ಸ್ಮೃತಿ  ಮಂದಾನ ಹಾಗೂ ಶಫಾಲಿ ವರ್ಮಾ ಜೋಡಿ ಮೈದಾನಕ್ಕಿಳಿದಿತ್ತು. ಆದರೆ 2 ರನ್ ಗಳಿಸಿದ್ದ ಶಫಾಲಿ ಕೀಪರ್ ಕೈಗೆ ಕ್ಯಾಚ್ ಒಪ್ಪಿಸಿದರು. ಈ ವೇಳೆ ಶಫಾಲಿ ಭಾರೀ ನಿರಾಸೆಗೆ ಒಳಗಾದರು, ಕ್ರೀಸ್‍ನಲ್ಲೇ ಮೌನಕ್ಕೆ ಶರಣಾಗಿ ದುಃಖ ಹೊತ್ತುಕೊಂಡು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

ಆಟಗಾರ್ತಿಯರ ಸ್ಟ್ಯಾಂಡಿನಲ್ಲಿ ಕುಳಿತ ಬಳಿಕವೂ ಶಫಾಲಿಗೆ ಬೇಸರ ತಡೆಯಲಾಗದೇ ಟೀ ಶರ್ಟ್ ನಿಂದ ಮುಖ ಮುಚ್ಚಿಕೊಂಡು ಕಣ್ಣೀರು ಹರಿಸಿದರು. ಚೊಚ್ಚಲ ಟಿ20 ವಿಶ್ವಪಕ್ ಚಾಂಪಿಯನ್‍ಶಿಪ್ ಕೈತಪ್ಪಲು ನಾನೇ ಕಾರಣ ಎಂಬಂತೆ ಶಫಾಲಿ ಕಣ್ಣೀರಾದರು.

Shafali Verma A

ಸೋಲಿನ ಬಳಿಕ ಟೀಂ ಇಂಡಿಯಾ ಆಟಗಾರ್ತಿಯರು ಮೌನಕ್ಕೆ ಶರಣಾದರು. ಇತ್ತ ಸ್ಟೇಡಿಯಂನಲ್ಲಿದ್ದ ಭಾರತ ತಂಡ ಅಭಿಮಾನಿಗಳು ಬೇಸರಗೊಂಡಿದ್ದರು. ಅಷ್ಟೇ ಅಲ್ಲದೆ ಪ್ರಶಸ್ತಿ ವಿತರಣಾ ಸಮಾರಂಭಕ್ಕೂ ಮುನ್ನ ಸಹ ಆಟಗಾರರ ಜೊತೆಗೆ ಮೈದಾನಕ್ಕೆ ಇಳಿದ ಶಫಾಲಿ ವರ್ಮಾ ಕಣ್ಣೀರು ಸುರಿಸಿದರು. ಈ ವೇಳೆ ನಾಯಕಿ ಹರ್ಮನ್‍ಪ್ರೀತ್ ಹಾಗೂ ಉಳಿದ ಆಟಗಾರರು ಶಫಾಲಿ ಅವರನ್ನು ಸಂತೈಸಲು ಹರ ಸಾಹಸಪಟ್ಟರು. ಶಫಾಲಿ ಕಣ್ಣೀರು ಹಾಕಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ತೋರಿದಿದ್ದರಿಂದ ಕೇವಲ 99 ರನ್ ಗಳಿಗೆ ಆಲೌಟ್‍ಗೆ ತುತ್ತಾಯಿತು. ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಮಾಡಿ ಎರಡು ಬಾರಿ ಪಂದ್ಯಶ್ರೇಷ್ಠಕ್ಕೆ ಪಾತ್ರವಾಗಿದ್ದ ಶಫಾಲಿ ಇಂದಿನ ಪಂದ್ಯದಲ್ಲಿ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಒಬ್ಬೊಬ್ಬರೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.

16 ವರ್ಷ, 40 ದಿನಗಳಲ್ಲಿ ವಿಶ್ವಕಪ್ ಫೈನಲ್ ಆಡಿದ ಶಫಾಲಿ:
ಭಾರತೀಯ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಟಿ20 ಮತ್ತು ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಆಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇಂದು ಫೈನಲ್ ಆಡಿದ ಶಫಾಲಿ ಅವರಿಗೆ 16 ವರ್ಷ 40 ದಿನ ಮಾತ್ರ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್‍ನ ಮಹಿಳಾ ಕ್ರಿಕೆಟಿಗ ಶಕಾನಾ ಕ್ವಿಂಟೈನ್ ವಿಶ್ವಕಪ್ ಫೈನಲ್ ಆಡಿದ ಅತ್ಯಂತ ಕಿರಿಯ ಆಟಗಾರ್ತಿಯಾಗಿದ್ದರು. ಅವರು 17 ವರ್ಷ ಮತ್ತು 45 ದಿನಗಳ ವಯಸ್ಸಿನಲ್ಲಿ 2013ರ ಏಕದಿನ ವಿಶ್ವಕಪ್‍ನ ಫೈನಲ್‍ನಲ್ಲಿ ಆಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಫೈನಲ್‍ನಲ್ಲಿ ಶಫಾಲಿ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಭಾರತದ ಇನ್ನಿಂಗ್ಸ್‍ನ ಮೂರನೇ ಎಸೆತದಲ್ಲಿ ಕೇವಲ 2 ರನ್‍ಗಳಿಗೆ ಔಟಾದರು. ಶಫಾಲಿ ಪ್ರಸಕ್ತ ಟಿ20 ವಿಶ್ವಕಪ್‍ನ ಟೂರ್ನಿಯ 4 ಪಂದ್ಯಗಳಲ್ಲಿ 161 ರನ್ ಗಳಿಸಿದ್ದರು. ಅವರು ಎರಡು ಪಂದ್ಯಗಳಲ್ಲಿ 47 ರನ್ ಮತ್ತು 46 ರನ್ ಗಳಿಸಿದ್ದರು. ಆದಾಗ್ಯೂ ಅವರು ಒಮ್ಮೆಯೂ 50 ರನ್‍ಗಳ ಗಡಿ ದಾಟಲಿಲ್ಲ.

Shafali Verma A

ಟಿ20 ಶ್ರೇಯಾಂಕದಲ್ಲಿ ನಂ.1:
2020ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಫಾಲಿ ವರ್ಮಾ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅತ್ಯಂತ ಕಡಿಮೆ 18 ಪಂದ್ಯಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಶಫಾಲಿ ನ್ಯೂಜಿಲೆಂಡ್‍ನ ಸುಜಿ ಬೇಟ್ಸ್ ಅವರನ್ನು ಹಿಂದಿಕ್ಕಿದ್ದಾರೆ.

Shafali Verma

Share This Article
Leave a Comment

Leave a Reply

Your email address will not be published. Required fields are marked *