ಶಿವಮೊಗ್ಗ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ನವರ ಕಾಟ ಹೆಚ್ಚಾಗಿದ್ದು, ಈ ಕೂಡಲೇ ಸಂತ್ರಸ್ತ ಮಹಿಳೆಯರ ಸಾಲ ಮನ್ನಾ ಮಾಡುವಂತೆ ಹಾಗೂ ಮೈಕ್ರೋ ಫೈನಾನ್ಸ್‌ಗಳನ್ನು ಮುಚ್ಚುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ನೂರಾರು ಮಹಿಳೆಯರು ಈ ಕೂಡಲೇ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದುಕೊಂಡವರ ಸಾಲವನ್ನು ಋಣಮುಕ್ತ ಕಾಯ್ದೆಯಡಿ ಜಾರಿಗೆ ತಂದು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದಲ್ಲಿ ರೈತ ಮತ್ತು ಕೂಲಿ ಕಾರ್ಮಿಕ ಮಹಿಳೆಯರ ಗುಂಪುಗಳನ್ನಾಗಿ ಮಾಡಿ ಮೈಕ್ರೋ ಫೈನಾನ್ಸ್‌ನವರು ಸಾಲ ನೀಡಿ ನಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ನೊಂದ ಮಹಿಳೆಯರು ಆರೋಪಿಸಿದರು.
Advertisement
Advertisement
ಗುಂಪಿನ ಆಧಾರದ ಮೇಲೆ ಸಾಲ ನೀಡಿರುವ ಫೈನಾನ್ಸ್‌ನ ಪ್ರತಿನಿಧಿಗಳು ನಿತ್ಯ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ಅತಿವೃಷ್ಟಿಯಿಂದಾಗಿ ಕೂಲಿ ಕೆಲಸವೂ ಇಲ್ಲದಂತಾಗಿದ್ದು, ರಾಷ್ಟ್ರೀಯ ಬ್ಯಾಂಕುಗಳಲ್ಲಿ ಬಡಜನತೆಗೆ ಸಾಲ ಸೌಲಭ್ಯ ನೀಡಲಾಗುತ್ತಿಲ್ಲ. ಹೀಗಾಗಿ ಮೈಕ್ರೋ ಫೈನಾನ್ಸ್ ಮೂಲಕ ಹಣ ಪಡೆದುಕೊಳ್ಳಲಾಗುತ್ತಿತ್ತು. ಇದೀಗ ಕಾನೂನುಗಳನ್ನು ಉಲ್ಲಂಘಿಸಿ ವಿಪರೀತ ಬಡ್ಡಿ ವಿಧಿಸಿ ನಮಗೆ ವಿನಾಕಾರಣ ಮೈಕ್ರೋ ಫೈನಾನ್ಸ್ ತೊಂದರೆ ನೀಡುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ.
Advertisement
Advertisement
ಶೇ. 25ರಿಂದ 40ರವರೆಗೆ ಬಡ್ಡಿ ವಿಧಿಸಿರುವುದು ಅಲ್ಲದೇ, ಸಾಲ ಪಡೆದಿರುವ ಮಹಿಳೆಯರ ಮನೆಗೆ ನಿರಂತರವಾಗಿ ಬಂದು ಕಿರುಕುಳ ನೀಡಲಾಗುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ನೂರಾರು ಮಹಿಳೆಯರ ಸಮಸ್ಯೆ ಮನಗಂಡು ಮೈಕ್ರೋ ಫೈನಾನ್ಸ್‌ನವರ ವ್ಯವಹಾರಕ್ಕೆ ಕಡಿವಾಣ ಹಾಕಬೇಕಿದೆ. ಜೊತೆಗೆ ಋಣಮುಕ್ತ ಕಾಯ್ದೆ ಜಾರಿಗೆ ತಂದು ನಮ್ಮ ಸಾಲ ಮನ್ನಾ ಮಾಡಬೇಕೆಂದು ಮಹಿಳೆಯರು ಆಗ್ರಹಿಸಿದರು.