ಗದಗ: ಅದು ಮುದ್ರಣಕಾಶಿ. ಸುಸಂಸ್ಕೃತರ ನೆಲ. ಆದರೀಗ ಇಲ್ಲಿ ಬಾರ್ ಗಳ ದರ್ಬಾರ್ ಜೋರು. ಹೀಗಾಗಿ ಬಾರ್ ಹಠಾವೋ ಮಠ ಬಚಾವೋ ಎಂದು ಬುಧವಾರದಂದು ಬಾರ್ ವಿರುದ್ಧ ಗದಗದ ಮಹಿಳೆಯರು ಸಿಡಿದೆದ್ದಿದ್ದರು.
Advertisement
ಹೌದು. ಗದಗನ ತೋಂಟದಾರ್ಯ ಮಠದ ಸಮೀಪವೇ ಹಲವಾರು ಬಾರ್ ಗಳಿವೆ. ಅದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದು, ಮಠದ ಬಳಿಯೇ ಬಾರ್ ಇರುವುದರಿಂದ ಭಕ್ತರಿಗೂ ಸಹ ಇರುಸು ಮುರುಸು ಉಂಟಾಗುತ್ತಿದೆ. ಕುಡುಕರ ಗಲಾಟೆಗೆ ಬೇಸತ್ತ ಆ ಬಾರ್ ಸುತ್ತಲಿನ ಸಾರ್ವಜನಿಕರು, ಮಹಿಳೆಯರು ಬುಧವಾರದಂದು ರೊಚ್ಚಿಗೆದ್ದಿದ್ದರು. ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ ಬಾರ್ ಹಠಾವೋ ಮಠ ಬಾಚಾವೋ ಅಂತ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳ ಮುಂದೆ ಮಹಿಳೆಯರು ಕಣ್ಣೀರು ಸುರಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಸುತ್ತಮುತ್ತಲಿನ ನಿವಾಸಿಗಳು ಮತ್ತು ಮಠದ ಪಕ್ಕದಲ್ಲೇ ಇರೋ ಮಹಿಳಾ ಹಾಸ್ಟೆಲ್‍ಗೂ ಕುಡುಕರ ಕಾಟ ತಡೆಯಲು ಆಗುತ್ತಿಲ್ಲ. ಅಲ್ಲದೆ ಬಾರ್ ಗಳಲ್ಲಿ ಕುಡಿದು ಬರೋ ಗಂಡಸರು ತಂದೆ, ತಾಯಿ, ಹೆಂಡತಿ ಅನ್ನೋದನ್ನೂ ನೋಡದೇ ಹೊಡೆದು ಹಿಂಸಿಸ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
ಈ ನರಕದಿಂದ ಸಿಟ್ಟಿಗೆದ್ದ ಸ್ಥಳೀಯರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಾರ್ ಹಠಾವೋ ಮಠ ಬಚಾವೋ ಹೋರಾಟ ಹಮ್ಮಿಕೊಂಡರು. ಪ್ರತಿಭಟನಾ ಮೆರವಣಿಗೆಗೆ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಶ್ರೀಗಳು ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಸಹ ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದರೆ ಉಗ್ರ ಹೊರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಧರ್ಮಗುರುಗಳೂ ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ಹಿಂದೂ ಮುಸ್ಲಿಂ ಎಂದು ಬೇದಭಾವ ಮಾಡದೆ ಎಲ್ಲಾ ಸ್ಥಳೀಯರು ಒಗ್ಗೂಡಿ ತೋಂಟದಾರ್ಯ ಮಠದ ಸುತ್ತಮುತ್ತಲಿನ ಬಾರ್ ಗಳನ್ನು ಸ್ಥಳಾಂತರಗೊಳಿಸಿ ಅಲ್ಲಿನ ಜನರನ್ನು ನರಕದಿಂದ ಪಾರು ಮಾಡಿ ಮನವಿ ಸಲ್ಲಿಸಿದ್ದಾರೆ.