ಕೊಪ್ಪಳ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ನಾಲ್ವರು ಮಹಿಳೆಯರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಬಳಿ ಸಂಭವಿಸಿದೆ.
ಗಂಗಾವತಿ ತಾಲೂಕಿನ ಸೋಮನಾಳ ಸೇತುವೆ ಸಮೀಪದ ಕಾಲುವೆಗೆ ಟ್ರ್ಯಾಕ್ಟರ್ ಬಿದ್ದಿದೆ. ಈ ಟ್ರ್ಯಾಕ್ಟರ್ ನಲ್ಲಿ ಒಬ್ಬ ಡ್ರೈವರ್ ಸೇರಿ 15 ಮಂದಿ ಮಹಿಳೆಯರು ಇದ್ದರು. ಸದ್ಯಕ್ಕೆ 11ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅವಘಡದಿಂದ ನಾಲ್ವರು ಮಹಿಳಾ ಕಾರ್ಮಿಕರು ನೀರುಪಾಲಾಗಿದ್ದು, ಅವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
Advertisement
ಸೋಮವಾರ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಕೂಲಿ ಕಾರ್ಮಿಕರು ಸೋಮನಾಳ ಗ್ರಾಮದಲ್ಲಿ ಹೊಲದಲ್ಲಿ ಕಳೆ ಕೀಳುವ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ವಾಪಸ್ ಬರುತ್ತಿದ್ದಾಗ ಸೋಮನಾಳ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರಾಲಿ ಸಮೇತ ಎಡದಂಡೆ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್ ಕಾಲುವೆಯಲ್ಲಿ ಪೂರ್ತಿಯಾಗಿ ಮುಳುಗಿದೆ.
Advertisement
Advertisement
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿ ಬಂದು ಕಾರ್ಯಾಚರಣೆ ಆರಂಭಿಸಿ ಕಾಲುವೆಗೆ ಬಿದ್ದವರಲ್ಲಿ 11 ಜನರನ್ನು ರಕ್ಷಣೆ ಮಾಡಲಾಗಿದೆ. ಅವರನ್ನು ಕಾರಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಮಹಿಳಾ ಕಾರ್ಮಿಕರಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಉಳಿದ ಇಬ್ಬರು ಮಹಿಳೆಯರಿಗಾಗಿ ಕಾರ್ಯಚರಣೆ ಮುಂದುವರಿದಿದೆ.
Advertisement
ಈ ಘಟನೆ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv