– 2025 ರಿಂದ ಹಣ ಜಮೆಯಾಗಿಲ್ಲ
– ಹಿಂಬಾಕಿಯೊಂದಿಗೆ ಎಲ್ಲಾ ಹಣ ಬಿಡುಗಡೆ ಮಾಡುವಂತೆ ಆದೇಶಿಸಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮಾಸಿಕ ಧನಸಹಾಯ ಸರಿಯಾಗಿ ತಲುಪುತ್ತಿಲ್ಲ ಎಂದು ಬೇಸತ್ತ ಬೆಂಗಳೂರಿನ ಇಬ್ಬರು ಮಹಿಳೆಯರು ಇದೀಗ ನೇರವಾಗಿ ಹೈಕೋರ್ಟ್ (High Court) ಮೆಟ್ಟಿಲೇರಿದ್ದಾರೆ.
ಯೋಜನೆ ಅಡಿ ಬರಬೇಕಿರುವ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಮಹಿಳೆಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದು, ಹೈಕೋರ್ಟ್ ಈ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್ ನಿವಾಸಿ ಜಿ.ಡಿ. ಪವಿತ್ರಾ ಅವರು ಜಂಟಿಯಾಗಿ ಈ ಕಾನೂನು ಹೋರಾಟಕ್ಕೆ ಮುಂದಾದ ಮಹಿಳೆಯರಾಗಿದ್ದಾರೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಸರ್ಕಾರದ ಗ್ಯಾರಂಟಿ ನಿರ್ವಹಣೆಯ ವೈಫಲ್ಯವನ್ನು ನ್ಯಾಯಪೀಠದ ಮುಂದೆ ತಂದಿಟ್ಟರು. ಅರ್ಜಿದಾರರಿಗೆ ಕಳೆದ 2025ರ ಫೆಬ್ರವರಿ ತಿಂಗಳಿನಿಂದ ಇಂದಿನವರೆಗೂ (ಮೇ 2026) ಗೃಹಲಕ್ಷ್ಮಿ ಯೋಜನೆಯ ಯಾವುದೇ ಕಂತಿನ ಹಣ ಜಮೆಯಾಗಿಲ್ಲ. ಕೇವಲ ಈ ಇಬ್ಬರು ಮಹಿಳೆಯರಷ್ಟೇ ಅಲ್ಲದೆ, ರಾಜ್ಯದಾದ್ಯಂತ ಲಕ್ಷಾಂತರ ಅರ್ಹ ಫಲಾನುಭವಿಗಳಿಗೆ ಕಳೆದ ಹಲವು ತಿಂಗಳುಗಳಿಂದ ಹಣ ತಲುಪಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನೂ ಓದಿ: ಗ್ಯಾರಂಟಿ ಹಣಕ್ಕಾಗಿ ಲಕ್ನೋ ಕಾಂಗ್ರೆಸ್ ಕಚೇರಿ ಮುಂದೆ ಸಾಲುಗಟ್ಟಿ ನಿಂತ ಮುಸ್ಲಿಂ ಮಹಿಳೆಯರು!

“ರಾಜ್ಯ ಸರ್ಕಾರವು ಪ್ರತಿ ವರ್ಷದ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡುತ್ತಿದೆ. ಬಜೆಟ್‌ನಲ್ಲಿ ಅಧಿಕೃತವಾಗಿ ಹಣ ಮೀಸಲಿಟ್ಟಿದ್ದರೂ, ಫಲಾನುಭವಿಗಳ ಖಾತೆಗೆ ಮಾತ್ರ ಹಣ ಜಮೆಯಾಗುತ್ತಿಲ್ಲ. ಹಾಗಿದ್ದಲ್ಲಿ ಸರ್ಕಾರ ಯೋಜನೆಗಾಗಿ ಇಟ್ಟ ಹಣ ಎಲ್ಲಿಗೆ ಹೋಯಿತು?” ಎಂದು ವಕೀಲರು ಪ್ರಶ್ನಿಸಿದರು. ಅಲ್ಲದೆ, ಇದುವರೆಗಿನ ಎಲ್ಲಾ ಹಿಂಬಾಕಿ (Arrears) ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಾಧೀಶರಾದ ಸೂರಜ್ ಗೋವಿಂದರಾಜು ಮತ್ತು ನ್ಯಾ.ಕೆ. ಮನ್ಮಥ ರಾವ್ ಅವರಿದ್ದ ವಿಭಾಗೀಯ ಪೀಠವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು.
ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಕುರಿತು ವಿವರಣೆ ಕೇಳಿ ರಾಜ್ಯ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನ್ಯಾಯಪೀಠವು ಅಧಿಕೃತ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಸರ್ಕಾರದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.

