ಕೋಲಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ತನ್ನ ಬ್ಯಾಂಕ್ ಅಕೌಂಟ್‍ಗೆ ಜಮಾವಣೆಯಾಗಿದ್ದ ಹಣ ನೀಡದ ಮಹಿಳೆಯನ್ನು ಗ್ರಾಮದ ಮುಖಂಡನ ಕುಟುಂಬ ಮಾರಣಾಂತಿಕವಾಗಿ ಥಳಿಸಿರುವ ಆರೋಪ ಕೇಳಿ ಬಂದಿದೆ.
ಕೋಲಾರ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಗ್ರಾಮದ ಈರಮ್ಮ ಎಂಬವರನ್ನು ಒಂದೇ ಕುಟುಂಬದ 5 ಜನ ಸದಸ್ಯರು ಹಲ್ಲೆ ನಡೆಸಿದ್ದಾರೆ. ಇದೇ ಗ್ರಾಮದ ಮಲ್ಲಪ್ಪ, ಹೇಮಂತ, ಶ್ರೀರಾಮ್, ಅನಿತಾ ಹಾಗೂ ಸುಜಾತ ಎಂಬವರು ಏಕಾಏಕಿ ಮನೆಗೆ ನುಗ್ಗಿ ಮನಬಂದಂತೆ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಗ್ರಾಮದಲ್ಲಿ ಪ್ರಭಾವಿಳಾಗಿರುವ ಮಲ್ಲಪ್ಪನವರ ಕುಟುಂಬದವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮದ ಒಂದಷ್ಟು ಜನ ಜಾಬ್‍ಕಾರ್ಡ್ ಹೊಂದಿದವರ ದಾಖಲಾತಿಗಳನ್ನು ಪಡೆದು ಹಣವನ್ನು ಅವರವರ ಖಾತೆಗೆ ಜಮಾ ಮಾಡಿದರು. ಆ ಹಣ ಬಂದ ನಂತರ ಒಂದಷ್ಟು ಹಣ ಮಾಡುವ ಒಪ್ಪಂದ ಕೂಡ ನಡೆದಿತ್ತು. ಆದರೆ ಈರಮ್ಮ ಹಣ ನೀಡುವುದು ತಡ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈರಮ್ಮನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಣ ಕೊಡುವಂತೆ ಕೇಳಿರುವ ಮಲ್ಲಪ್ಪನಿಗೆ ಸಂಜೆ ಆಗಿದೆ ಬ್ಯಾಂಕ್ ಇರುವುದಿಲ್ಲ ನಾಳೆ ಹಣ ನೀಡುವುದಾಗಿ ಹೇಳಿದ್ದು, ಇದರಿಂದ ಕೋಪಗೊಂಡ ಮಲ್ಲಪ್ಪ ಮತ್ತು ಕುಟುಂಬಸ್ಥರು ಈರಮ್ಮ ಎಂಬವರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ. ಸದ್ಯ ಗಾಯಾಳು ಈರಮ್ಮ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.