ಲಕ್ನೋ: ಉತ್ತರ ಪ್ರದೇಶದ ಸೀತಾಪುರ್ ಎಂಬಲ್ಲಿ ತಾಯಿಯೇ ತನ್ನ ಸ್ವಂತ ಮಗಳನ್ನು ಅಪಹರಣ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ತಾನು ಆಯ್ಕೆ ಮಾಡಿಕೊಂಡ ಯುವಕನ ಜೊತೆ ಇತ್ತೀಚೆಗೆ ಮಗಳು ಮದುವೆ ಮಾಡಿಕೊಂಡಿದ್ದಳು. ಈ ಮದುವೆಗೆ ತಾಯಿಯ ವಿರೋಧವಿತ್ತು. ಮದುವೆಯಾದ ಬಳಿಕ ತನ್ನ ಪತಿ ಜೊತೆ ಮಗಳು ತನ್ನ ತಾಯಿ ಮನೆಗೆ ಬಂದಿದ್ದಾಳೆ. ಈ ವೇಳೆ, ತಾಯಿ ಅಳಿಯನ ವಿರುದ್ಧ ಕಿರುಕುಳದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಮದುವೆಗೆ ತಾಯಿಯ ವಿರೋಧವಿತ್ತು. ಹೀಗಾಗಿ ಕಿರುಕುಳ ನೀಡಿರುವ ಆರೋಪದ ಮೇಲೆ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಆದರೆ ಇಂದು ಜೋಡಿ ಮತ್ತೊಂದು ವಿಚಿತ್ರ ವಿಷಯವನ್ನಿಟ್ಟುಕೊಂಡು ಬಂದಿದ್ದಾರೆ. ತಾಯಿ ನನ್ನನ್ನು ಅಪಹರಣ ಮಾಡಲು ಯತ್ನಿಸಿದ್ದಾಳೆ ಎಂದು ಜೋಡಿ ಪೊಲೀಸ್ ಠಾಣೆಗೆ ಬಂದಿದೆ. ಈ ಸಂಬಂಧವೂ ಕ್ರಮ ಕೈಗೊಂಡಿರುವುದಾಗಿ ಎಎಸ್‍ಪಿ ಮಧುಬಾನ್ ಸಿಂಗ್ ಹೇಳಿದ್ದಾರೆ.
ಇಬ್ಬರು ವ್ಯಕ್ತಿಗಳೊಂದಿಗೆ ಬಂದ ನನ್ನ ತಾಯಿ ಹಾಗೂ ಸಹೋದರಿ ನನ್ನನ್ನು ಎಳೆದು ಕಾರಿನೊಳಗೆ ಹಾಕಲು ಯತ್ನಿಸಿದ್ದಾರೆ. ಆದರೆ ಇದನ್ನು ನಾನು ವಿರೋಧಿಸಿದ್ದೇನೆ. ನನ್ನ ಮದುವೆಗೆ ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ನಾನು ಓಡಿ ಹೋಗಿ ಮದುವೆಯಾಗಿದ್ದೇನೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.