ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎನ್ನುವ ಸಂಕಲ್ಪ ಮಾಡಿಕೊಂಡು ಚೆನ್ನೈ ಮೂಲದ ಅಭಿಮಾನಿಯೊಬ್ಬರು ಬೈಕ್ ಮೇಲೆ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.
ರಾಜಲಕ್ಷ್ಮಿ ಮಾಂಡ ಬೈಕ್ ಮೇಲೆ ದೇಶದಾದ್ಯಂತ ಪ್ರವಾಸ ಕೈಗೊಂಡಿದ್ದು, ಅದೇ ರೀತಿ ಮಧ್ಯ ಕರ್ನಾಟಕ ದಾವಣಗೆರೆಗೂ ಸಹ ಆಗಮಿಸಿ ಮೋದಿ ಬಗ್ಗೆ ಪ್ರಚಾರ ಕೈಗೊಂಡು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ದೇಶ ಅಭಿವೃದ್ಧಿಯಾಗಬೇಕು ಎಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಿ ಆಗ ಮಾತ್ರ ದೇಶ ಅಭಿವೃದ್ಧಿ ಯತ್ತ ಸಾಗುತ್ತದೆ ಎಂದರು. ರಾಜಲಕ್ಷ್ಮಿ ಮಾಂಡ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಫೋಟೋ ಹೊಡೆಸಿಕೊಂಡು ಸಂಭ್ರಮಿಸಿದ್ದಾರೆ.
ರಾಜಲಕ್ಷ್ಮಿ ಮಾಂಡ ಅವರು 8 ರಾಜ್ಯಗಳಲ್ಲಿ 55 ದಿನಗಳ ಕಾಲ 15 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರ ಬೈಕಿನಲ್ಲಿ ಪ್ರಯಾಣ ಬೆಳಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡು ದೆಹಲಿಗೆ ಸೇರುವ ಯೋಜನೆ ಹಾಕಿಕೊಂಡಿದ್ದಾರೆ.
ಅಲ್ಲದೇ ಸಂಕಲ್ಪ ಎಷ್ಟು ಧೃಡವಾಗಿದೆ ಎನ್ನುವುದನ್ನು ತೋರಿಸಲು ರಾಜಲಕ್ಷ್ಮಿ ಮಾಂಡ ಒಬ್ಬರೇ ಲಾರಿಯನ್ನು ಏಳೆದು ಜನರನ್ನು ಆಕರ್ಷಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ರಾಜಲಕ್ಷ್ಮಿ ಮಾಂಡ ಅವರನ್ನು ಡೊಳ್ಳು ಬಾರಿಸುತ್ತ ಅದ್ಧೂರಿಯಾಗಿ ಬೀಳ್ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv