ಕ್ಯಾಲಿಪೋರ್ನಿಯಾ: ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬರು ಬಾಲಕಿಯ ಅಪಹರಣವನ್ನು ತಪ್ಪಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಬಾಲಕಿ ಮಾರ್ಟಿನೆಜ್ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಯೊಬ್ಬ ಬಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಕ್ಲೌಡಿಯಾ ಎಂಬ ಮಹಿಳೆ ಇದನ್ನು ಗಮನಿಸಿದ್ದಾರೆ. ನಂತರ ಮಹಿಳೆ ಬಾಲಕಿಯ ಬಳಿ ಬಂದು ಅಮ್ಮನಂತೆ ಪೋಸು ಕೊಟ್ಟಿದ್ದಾರೆ.
ಮಹಿಳೆ ಬಾಲಕಿಯ ಹೆಗಲ ಮೇಲೆ ಕೈಹಾಕಿಕೊಂಡು ಸುಮ್ಮನೇ ನಡೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅಪರಿಚಿತ ಮಹಿಳೆ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಿಂದ ಅಳಲಾರಂಭಿಸಿದ್ದಾಳೆ. ಬಾಲಕಿ ಅಳುತ್ತಿದ್ದರಿಂದ ಮಹಿಳೆ ಸ್ಪ್ಯಾನಿಶ್ ಭಾಷೆ ಮಾತನಾಡುತ್ತಿದ್ದರೂ ಬಾಲಕಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಅವಳನ್ನು ಶಾಲೆಯವರೆಗೂ ಬಿಟ್ಟಿದ್ದಾರೆ.
ಮಹಿಳೆ ಶಾಲಾ ಅಧಿಕಾರಿಗಳಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಬಾಲಕಿ ಅಪಹರಣದಿಂದ ಪಾರಾಗಿದ್ದಾಳೆ. ಅಪಹರಣಕಾರರಿಂದ ತನ್ನನ್ನು ಕಾಪಾಡಿದ ಮಹಿಳೆ ನಿಜಕ್ಕೂ ಧೈರ್ಯವಂತೆ ಎಂದು ಬಾಲಕಿ ಹೇಳಿದ್ದಾಳೆ.