Connect with us

ಬೆಂಗಳೂರಿಗರೇ ಎಚ್ಚರವಾಗಿರಿ, ಕಾರಿನಲ್ಲಿ ಹೋಗುತ್ತಿರುವಾಗ ಕಳ್ಳರು ನಿಮ್ಮನ್ನೂ ಹೀಗೂ ಸುಲಿಗೆ ಮಾಡಬಹುದು!

ಬೆಂಗಳೂರಿಗರೇ ಎಚ್ಚರವಾಗಿರಿ, ಕಾರಿನಲ್ಲಿ ಹೋಗುತ್ತಿರುವಾಗ ಕಳ್ಳರು ನಿಮ್ಮನ್ನೂ ಹೀಗೂ ಸುಲಿಗೆ ಮಾಡಬಹುದು!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುಲಿಗೆಕೋರರ ಹಾವಳಿ ಮುಂದುವರೆದಿದ್ದು,  ಜನರು ನೋಡುತ್ತಿದ್ದಂತೆ  ದುಷ್ಕರ್ಮಿಗಳು  ಕಾರಿನಿಂದ   ಹಣದ ಬ್ಯಾಗನ್ನು ಸುಲಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಫೆಬ್ರವರಿ 15 ರಂದು ಭಾರತಿನಗರದ ಅಡ್ಯಾರ್ ಆನಂದ್ ಭವನ್ ಹೊಟೇಲ್ ಬಳಿ ನಡೆದಿದೆ. ಈ ಸಂಬಂಧ ಆಶಾ ಕಿರಣ್ ಎಂಬವರು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಂದು ಏನಾಯ್ತು?
ಬುಧವಾರ ಸಂಜೆ 4 ಗಂಟೆ ವೇಳೆಗೆ ಕಾರಿನಲ್ಲಿ ಭಾರತೀನಗರ ಠಾಣೆ ಸಮೀಪದಿಂದ ಅಲಸೂರು ಕೆರೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಅಡ್ಯಾರ್ ಆನಂದ ಭವನ್ ಬಳಿ ಬೈಕಿನಲ್ಲಿ ಬಂದಿದ್ದ ಸವಾರನೊಬ್ಬ ಇಂಧನ ಟ್ಯಾಂಕ್ ಫುಲ್ ಆಗಿ ಸೋರುತ್ತಿದೆ ಎಂದು ಹೇಳಿದ್ದ. ಈತನ ಮಾತನ್ನು ನಂಬಿದ್ದ ಆಶಾ ಕಿರಣ್ ತಮ್ಮ ಕಾರನ್ನು ನಿಲ್ಲಿಸಿ ಇಂಧನ ಟ್ಯಾಂಕನ್ನು ಪರೀಕ್ಷೆ ಮಾಡಿದ್ದಾರೆ. ಪರಿಶೀಲನೆ ವೇಳೆ ಸೀಮೆ ಎಣ್ಣೆಯನ್ನು ಇಂಧನ ಟ್ಯಾಂಕ್ ಮೇಲೆ ಚೆಲ್ಲಿರುವುದು ಗೊತ್ತಾಗಿದೆ.

ಆಶಾ ಅವರು ಕಾರಿನಿಂದ ಇಳಿಯುವುದನ್ನು ಕಾದಿದ್ದ ದುಷ್ಕರ್ಮಿಗಳ ಗುಂಪು ಡೋರ್ ತೆಗೆದು ಬ್ಯಾಗನ್ನು ಕದ್ದುಕೊಂಡು ಪರಾರಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಜನರಿದ್ದರೂ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ. ಬಳಿಕ ರಾತ್ರಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಆಶಾ ಅವರು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದಾರೆ.

ಹಣ ಹೋಯ್ತು ಕಾರ್ಡ್  ಸಿಕ್ಕಿತ್ತು: ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಅನಾಮಿಕ ವ್ಯಕ್ತಿಯೊಬ್ಬರು ಕರೆ ಮಾಡಿ ಒಂದು ಬ್ಯಾಗ್ ನಮಗೆ ಸಿಕ್ಕಿದೆ. ಆ ಬ್ಯಾಗ್‍ನಲ್ಲಿ ನಿಮ್ಮ ನಂಬರ್ ಇತ್ತು ಎಂದು ತಿಳಿಸಿದ್ದಾರೆ. ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ವಿಳಾಸಕ್ಕೆ ತೆರಳಿದ ಆಶಾ ಅವರು ತಮ್ಮ ಬ್ಯಾಗ್ ಪಡೆದುಕೊಂಡಿದ್ದಾರೆ. ಈ ವೇಳೆ ಬ್ಯಾಗ್‍ನಲ್ಲಿದ್ದ 30 ಸಾವಿರ ರೂ. ಹಣವನ್ನು ದೋಚಿದ್ದ ಕಳ್ಳರು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಿಟ್ಟು ತೆರಳಿದ್ದಾರೆ.

ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,  ಎಲ್ಲ ಸಿಗ್ನಲ್‍ಗಳಲ್ಲಿ ಸಿಸಿ ಕ್ಯಾಮೆರಾಗಳ ದೃಶ್ಯ ಇದ್ದರೂ ಪೊಲೀಸರು ಈ ರೀತಿಯ ಕೃತ್ಯ ನಡೆಯುತ್ತದೆ ಎಂದು ತಿಳಿಸಿದ್ದಾರೆ ಎಂಬುದಾಗಿ ಆಶಾ ಕಿರಣ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮತ್ತೊಂದು ಕೃತ್ಯ: ನನ್ನ ಗಮನವನ್ನು ಬೇರೆಡೆಗೆ ಸೆಳೆದು ಹೇಗೆ ಕಳ್ಳತನ ಮಾಡಿದ್ದಾರೋ ಅದೇ ರೀತಿ ಕೃತ್ಯ ಅದೇ ದಿನ ಮಧ್ಯಾಹ್ನ 2.45ಕ್ಕೆ ನಡೆದಿದೆ. ಗೌರಿ ದೀಪಕ್ ಅವರ ವಸ್ತುಗಳನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ಆಶಾ ಕಿರಣ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

 

Advertisement
Advertisement