ರಾಮನಗರ: ಸಾರ್ವಜನಿಕರೊಬ್ಬರ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿದ ಉಪವಿಭಾಗಧಿಕಾರಿಗೆ ದೂರುದಾರಳು ಬಳೆ ತೊಡಿಸಿ ಸ್ವಾಗತ ಕೋರಿದ ಘಟನೆ ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಉಪವಿಭಾಗಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಳೆದ ಗುರುವಾರ ನಡೆದ ಎಸ್ಸಿ-ಎಸ್ಟಿ ಸಭೆಯಲ್ಲಿ ಬನ್ನಿಕುಪ್ಪೆ ಗ್ರಾಮದ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಇತ್ತೀಚೆಗೆ ನಮ್ಮ ಮೇಲೆ ಎದುರು ಮನೆಯ ನಿವಾಸಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾದರೂ, ದಲಿತರ ಸಮಸ್ಯೆಗಳನ್ನು ಕೇಳುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು.
Advertisement
ಮಹಿಳೆಯ ದೂರು ಸ್ವೀಕರಿಸಿದ ರಾಮನಗರ ಉಪವಿಭಾಗಧಿಕಾರಿ ಡಾ.ಕೆ ದಾಕ್ಷಾಯಿಣಿ ಗ್ರಾಮದ ದಲಿತ ಮಹಿಳೆಯ ಮನೆಗೆ ತಹಶೀಲ್ದಾರ್ ಅವರೊಂದಿಗೆ ಭೇಟಿ ನೀಡಿದರು. ಅಲ್ಲದೆ ದೂರುದಾರಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಮಧಾನ ಪಡಿಸಿದ್ದಾರೆ. ಸ್ಥಳದಲ್ಲಿಯೇ ವಾದಿ – ಪ್ರತಿವಾದಿಗಳಿಬ್ಬರನ್ನೂ ಮುಖಾಮುಖಿ ಕೂರಿಸಿ, ರಾಜಿ ಸಂಧಾನ ನಡೆಸಿದ್ದಾರೆ. ಸ್ಥಳದಲ್ಲೇ ತೆಂಗಿನ ಎಳೆನೀರು ತರಿಸಿ, ವಾದಿ -ಪ್ರತಿವಾದಿಗಳಿಗೆ ಕುಡಿಸಿ, ಇನ್ನು ಮುಂದೆ ಇಬ್ಬರು ಸಂಬಂಧಿಗಳಾಗಿ ಬದುಕಬೇಕು ಎಂದು ಹಿತವಚನ ಹೇಳಿದ್ದಾರೆ.
Advertisement
Advertisement
ದೂರುದಾರ ಮಹಿಳೆ ಬಳೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಎಸಿ ಅವರನ್ನು ಕಂಡ ಕೂಡಲೇ ಅವರ ಕೈಗೆ ಬಳೆ ತೊಡಿಸಿ ತಮ್ಮ ಸ್ವಾಗತ ಕೋರಿದ್ದಾರೆ. ಇನ್ನು ಗಾಜಿನ ಬಳೆ ತೊಟ್ಟು ಉಪವಿಭಾಗಧಿಕಾರಿಗಳು ತಮಗೆ ಸಿಕ್ಕ ಅಚ್ಚರಿಯ ಸ್ವಾಗತಕ್ಕೆ ಖುಷಿ ಪಟ್ಟಿದ್ದಾರೆ.
Advertisement
ಕಳೆದ ಮೂರು ತಿಂಗಳ ಹಿಂದೆ ದೂರುದಾರ ಮಹಿಳೆ ತಮ್ಮ ಮನೆ ಮುಂದೆ ನುಗ್ಗೆಕಾಯಿ ಗಿಡ ಬೆಳೆಸಿದ್ದರು. ಎದುರು ಮನೆಯ ಯುವಕನೊಬ್ಬ ನುಗ್ಗೆಕಾಯಿ ಕೀಳಲು ಮುಂದಾಗಿದ್ದಾನೆ. ಮಾರುಕಟ್ಟೆಯಲ್ಲಿನ ನುಗ್ಗೆಕಾಯಿ ದರದಿಂದಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವು ನಡೆದಿದೆ. ಮಹಿಳೆಗೆ ಮನಬಂದಂತೆ ಥಳಿಸಲಾಗಿತ್ತು. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.