ಲಗೇಜ್‍ಗೆ ಹೆಚ್ಚುವರಿ ಹಣ ಪಾವತಿಸಿ ಎಂದಿದ್ದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಅಂತ ಏರ್‌ಪೋರ್ಟ್‌ನಲ್ಲಿ ಮಹಿಳೆ ಡ್ರಾಮಾ

Public TV
2 Min Read
Mumbai Airport

ಮುಂಬೈ: ಹೆಚ್ಚುವರಿ ಲಗೇಜ್‍ಗೆ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಅಂತ ಮಹಿಳೆಯೊಬ್ಬಳು ಹೈಡ್ರಾಮಾ ಮಾಡಿದ ಘಟನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  (Mumbai Airport) ನಡೆದಿದೆ.

ಹೆಚ್ಚುವರಿ ಲಗೇಜ್ ತಂದಿದ್ದ ಮಹಿಳೆಗೆ ಏರ್‌ಪೋರ್ಟ್ ಸಿಬ್ಬಂದಿ ಹಣ ನೀಡುವಂತೆ ಸೂಚಿಸಿದ್ದಾರೆ. ಈ ವೇಳೆ ಜಗಳಕ್ಕಿಳಿದ ಮಹಿಳೆಯೊಬ್ಬಳು ತನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಬೆದರಿಸಿದ್ದಾಳೆ. ಕೂಡಲೆ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ ಬ್ಯಾಗ್‍ಗಳನ್ನು ಪರಿಶೀಲಿಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದನ್ನೂ ಓದಿ: ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೇಂಟ್‌, 2 FIR

ಮಹಿಳೆಯ ವಿರುದ್ಧ ಜೀವ ಮತ್ತು ಇತರರ ಸುರಕ್ಷತೆಗೆ ಧಕ್ಕೆ ಆರೋಪದ ಮೇಲೆ ಎಫ್‍ಐಆರ್ (FIR) ದಾಖಲಿಸಲಾಗಿದೆ. ಕೋರ್ಟ್ ಮುಂದೆ ಹಾಜರುಪಡಿಸಿ ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಹರ್ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಗುರುತನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.

ಘಟನೆ ಹಿನ್ನೆಲೆ: ಮಹಿಳೆಯು ತನ್ನ ತಾಯಿಯನ್ನು ಭೇಟಿಯಾಗಲು ಮೇ 29 ರಂದು ಕೊಲ್ಕತ್ತಾಕ್ಕೆ (Kolkata) ಹೊರಟಿದ್ದಳು. 5:30 ರ ವೇಳೆ ಚೆಕ್ ಇನ್ ಆಗಲು ಚೆಕ್ ಇನ್ ಕೌಂಟರ್ ತಲುಪಿದ್ದಳು. ವಿಮಾನಯಾನ ನಿಯಮಗಳು ದೇಶೀಯ ಪ್ರಯಾಣಕ್ಕಾಗಿ ಗರಿಷ್ಠ 15 ಕೆಜಿಯ ಒಂದೇ ಬ್ಯಾಗ್ ಅನುಮತಿಸುತ್ತದೆ. ಆದರೆ ಮಹಿಳೆ ಎರಡು ಬ್ಯಾಗ್‍ಗಳನ್ನು ಹೊಂದಿದ್ದಳು ಮತ್ತು ಅದರ ತೂಕ 22.05 ಕೆಜಿ ಇತ್ತು.

ಲಗೇಜ್ ತೂಕ ಹೆಚ್ಚಿದ್ದ ಹಿನ್ನಲೆ ಹಚ್ಚುವರಿ ಬ್ಯಾಗ್‍ಗೆ ಹಣ ಪಾವತಿಸುವಂತೆ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಮನವಿ ಮಾಡಿದ್ದಾರೆ. ಇದಕ್ಕೆ ನಿರಾಕರಿಸಿದ ಮಹಿಳೆ ಸಿಬ್ಬಂದಿ ಜೊತೆಗೆ ಜಗಳಕ್ಕಿಳಿದು ಕೂಗಾಡಲು ಆರಂಭಿಸಿದ್ದಾಳೆ ಕಡೆಗೆ ತನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಕೂಗಿ ಹೇಳಿದ್ದಾಳೆ. ಮಹಿಳೆಯ ವರ್ತನೆಯಿಂದ ಆತಂಕಕ್ಕೆ ಒಳಗಾದ ಸಿಬ್ಬಂದಿ ಭದ್ರತಾ ಪಡೆಗಳ ನೆರವು ಪಡೆದಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿ ರೂವಾರಿ ರಾಣಾ ಹಸ್ತಾಂತರಕ್ಕೆ ರಿಟ್ ಸವಾಲು

Share This Article