ಮುಂಬೈ: ಮರಾಠಿ (Marathi) ಭಾಷೆ ಮಾತನಾಡಿಲ್ಲ ಎಂದು ತನ್ನ 6 ವರ್ಷದ ಮಗಳನ್ನೇ ಮಹಿಳೆಯೊಬ್ಬಳು (woman) ಕತ್ತು ಹಿಸುಕಿ ಕೊಂದಿರುವುದು ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.
ನವಿ ಮುಂಬೈನ ಕಲಾಂಬೋಲಿಯಲ್ಲಿ ವಾಸವಾಗಿದ್ದ 30 ವರ್ಷದ ಮಹಿಳೆ ಮಗಳ ಸಾವನ್ನು ಹೃದಯಾಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು. ಈ ವೇಳೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರಾಟಕ್ಕೆ ಅಡಚಣೆ ಉಂಟಾಗಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಬಳಿಕ ಮಹಿಳೆಯ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಉಡುಪಿ| ಮೂರು ಕಡೆಯಿಂದ ಸುತ್ತುವರಿದು ಚಿನ್ನ ಎಗರಿಸ್ತಿದ್ದ ಕಳ್ಳಿಯರ ಗ್ಯಾಂಗ್ ಅಂದರ್
ಮಗುವಿನ ಅಜ್ಜಿ ಕೊಲೆ ನಡೆದ ದಿನನ ಮನೆಗೆ ಭೇಟಿ ನೀಡಿದ್ದರು. ಆದರೆ ಮೊಮ್ಮಗಳನ್ನು ಭೇಟಿಯಾಗಲು ಸಾಧ್ಯವಾಗದೇ ವಾಪಸ್ ಆಗಿದ್ದರು. ಆ ದಿನ ಸಂಜೆ ಮಹಿಳೆಯ ಪತಿ ಮನೆಗೆ ಮರಳಿದಾಗ, ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಮಗುವಿಗೆ ಹೃದಯಾಘಾತವಾಗಿದೆ ಎಂದು ಮಹಿಳೆ ಹೇಳಲು ಆರಂಭಿಸಿದ್ದಳು. ಇದರಿಂದ ಪೊಲೀಸರಿಗೆ ಅನುಮಾನ ಮೂಡಿ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ತಿಳಿದು ಬಂದಿದೆ.
ವಿಜ್ಞಾನ ಪದವೀಧರೆಯಾಗಿರುವ ಮಹಿಳೆ ಮತ್ತು ಆಕೆಯ ಐಟಿ ಎಂಜಿನಿಯರ್ ಪತಿ 2017 ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಎರಡು ವರ್ಷಗಳ ನಂತರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ಚಿಕ್ಕ ವಯಸ್ಸಿನಿಂದಲೂ ಮಾತನಾಡಲು ತೊಂದರೆ ಇತ್ತು. ಅವಳು ಹೆಚ್ಚಾಗಿ ಮರಾಠಿ ಬದಲಿಗೆ ಹಿಂದಿ ಮಾತನಾಡುತ್ತಿದ್ದಳು, ಇದರಿಂದ ಅವಳ ತಾಯಿ ಆಗಾಗ ಸಿಟ್ಟಾಗುತ್ತಿದ್ದಳು.
ನನಗೆ ಇಂತಹ ಮಗು ಬೇಡ. ಅವಳು ಸರಿಯಾಗಿ ಮಾತನಾಡುವುದಿಲ್ಲ ಎಂದು ಆಗಾಗ ಪತಿಯ ಜೊತೆ ವಾದಿಸುತ್ತಿದ್ದಳು. ಆಕೆ ಗಂಡು ಮಗುವನ್ನು ಬಯಸಿದ್ದಳು. ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಅತೃಪ್ತಿ ಹೊಂದಿದ್ದಳು ಎಂದು ತಿಳಿದು ಬಂದಿದೆ. ಇದರ ಜೊತೆ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ | ಅಮಾನತಾಗಿದ್ದ ಪ್ರೊಫೆಸರ್ ಶವ ಕಾರಲ್ಲಿ ಪತ್ತೆ

