ದಾವಣಗೆರೆ: ತವರು ಮನೆಯಿಂದ ವರದಕ್ಷಿಣೆ (Dowry Case) ತರುವಂತೆ ಚಿತ್ರಹಿಂಸೆ ನೀಡಿ ಮೂರು ತಿಂಗಳ ಗರ್ಭಿಣಿಯನ್ನು ಪತಿಯೇ ಕೊಲೆಗೈದ ಘಟನೆ ಚನ್ನರಾಯಪಟ್ಟಣ (Channarayapatna) ನೊರನಕ್ಕಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ನಯನ (24) ಎಂದು ಗುರುತಿಸಲಾಗಿದೆ. ಆಕೆಯ ಪತಿ ಅಯ್ಯಪ್ಪ ಕೊಲೆಗೈದ ಆರೋಪಿಯಾಗಿದ್ದಾನೆ. ಕೊಲೆಯ ಬಳಿಕ ಆರೋಪಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಮೂರು ವರ್ಷಗಳ ಹಿಂದೆ ನೊರನಕ್ಕಿ ಗ್ರಾಮದ ಅಯ್ಯಪ್ಪ ಹಾಗೂ ನಯನ ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದವರೆಗೆ ಗಂಡ-ಹೆಂಡತಿ ಚೆನ್ನಾಗಿಯೇ ಇದ್ದರು. ನಂತರದಲ್ಲಿ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಜಮೀನು, ಹಣ, ಒಡವೆ ತರುವಂತೆ ಅಯ್ಯಪ್ಪ ಹಿಂಸೆ ನೀಡಲು ಆರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಹಲವಾರು ಬಾರಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು.
Advertisement
Advertisement
ಈ ನಡುವೆ ನಯನ ಗರ್ಭಿಣಿಯಾಗಿದ್ದರಿಂದ ಒಂದು ತಿಂಗಳಿನಿಂದ ತವರು ಮನೆಯಲ್ಲೇ ಉಳಿದುಕೊಂಡಿದ್ದಳು. ನ.17 ರ ರಾತ್ರಿ ಅಯ್ಯಪ್ಪ, ಮಾವನ ಮನೆಗೆ ಬಂದು ಅಲ್ಲಿಯೇ ಉಳಿದುಕೊಂಡಿದ್ದ. ಮರುದಿನ ಬೆಳಿಗ್ಗೆ ನಯನಾಳನ್ನು ಮಲ್ಲಪ್ಪನ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದ. ಅಂದಿನಿಂದ ನಯನ ತವರು ಮನೆಯವರ ಫೋನ್ ರಿಸೀವ್ ಮಾಡಿರಲಿಲ್ಲ. ಸೋಮವಾರ ರಾತ್ರಿ ಅಯ್ಯಪ್ಪ ಸಂಬಂಧಿ ಶೃತಿ ಎಂಬುವವರು ನಯನಾಳ ತಾಯಿಗೆ ಕರೆ ಮಾಡಿ, ನಿಮ್ಮ ಮಗಳಿಗೆ ಆರೋಗ್ಯ ಸರಿ ಇಲ್ಲ ಎಂದು ತಿಳಿಸಿದ್ದಾರೆ.
Advertisement
ವಿಚಾರ ತಿಳಿದ ನಯನ ತಾಯಿ ಕರೆ ಮಾಡಿದಾಗ, ಅಯ್ಯಪ್ಪ ಕರೆ ಸ್ವೀಕರಿಸಿ, ನಿಮ್ಮ ಮಗಳನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಕರೆ ಕಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ವರದಕ್ಷಿಣೆಗಾಗಿ ನಿತ್ಯ ಕಿರುಕುಳದಿಂದ ರೋಸಿ ಹೋಗಿದ್ದ ನಯನ ಎರಡು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದಳು. ಆದರೂ ಯಾವುದೇ ಕ್ರಮ ಆಗಿರಲಿಲ್ಲ. ಇದೀಗ ಪತ್ನಿಯನ್ನೇ ಆತ ಕೊಂದು ಹಾಕಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನಯನ ಪೋಷಕರು ಒತ್ತಾಯಿಸಿದ್ದಾರೆ.
ಚನ್ನರಾಯಪಟ್ಟಣ ತಹಸೀಲ್ದಾರ್ ವಿ.ಎಸ್.ನವೀನ್‍ಕುಮಾರ್ ಶವಾಗಾರಕ್ಕೆ ಭೇಟಿ ನೀಡಿ ಮೃತಳ ಪೋಷಕರಿಂದ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.