ಧಾರವಾಡ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ಹಾವಳಿ ಜೋರಾಗಿದೆ. ಪೋಷಕರು ತಮ್ಮ ಮಕ್ಕಳು ಎಲ್ಲಿ ಕಳ್ಳತನವಾಗಿ ಬಿಡುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಆದರೆ ಧಾರವಾಡದಲ್ಲಿ ತಾಯಿಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಅಪರಿಚಿತ ಮಹಿಳೆಯೊಬ್ಬರ ಕೈಗೆ ತನ್ನ ಮಗುವನ್ನ ಕೊಟ್ಟು ಪರಾರಿಯಾಗಿದ್ದಾಳೆ.
ಧಾರವಾಡ ನಗರದ ಚರಂತಿಮಠ ಗಾರ್ಡನ್ ನ ಬನಶಂಕರಿ ಕಲ್ಯಾಣ ಮಂಟಪದ ಬಳಿ ಸೋಮವಾರ ರಾತ್ರಿ ಮಹಿಳೆಯೊಬ್ಬಳು ತನ್ನ ನವಜಾತ ಗಂಡು ಮಗುವನ್ನು ಅಲ್ಲೇ ಇದ್ದ ಇಬ್ಬರು ಮಹಿಳೆಯರ ಕೈಗೆ ಕೊಟ್ಟು ಹೋಗಿದ್ದಾಳೆ.
ಮಗು ಪಡೆದಿದ್ದ ಮಹಿಳೆಯರು ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ್ದ ಈ ಮಹಿಳೆಯ ವಾಪಸ್ ಬರುವಿಕೆಯನ್ನ ಕಾದು ಕುಳಿತ್ತಿದ್ದರು. ಆದರೆ ತುಂಬಾ ಸಮಯವಾದರೂ ಆಕೆ ಬರಲಿಲ್ಲ. ಕೊನೆಗೆ ಆ ಮಗುವನ್ನ ಶಹರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪೊಲೀಸರು ಮಗುವನ್ನ ಜಿಲ್ಲಾ ಆಸ್ಪತ್ರೆಯಲ್ಲಿ ಆರೈಕೆ ಮಾಡಿದ್ದು, ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಕೂಡಾ ಮಗು ಕೊಟ್ಟು ಪರಾರಿಯಾಗಿದ್ದ ತಾಯಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.