ತುಮಕೂರು: ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಭಾಗ್ಯ ಕಲ್ಪಿಸುವುದಾಗಿ ಹಣ ಪಡೆದು ನಕಲಿ ವೈದ್ಯ ದಂಪತಿ ನೀಡಿದ್ದ ನಕಲಿ ಐವಿಎಫ್ ಚಿಕಿತ್ಸೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾರೆ.
ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಮಮತಾ(32) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಮತಾಗೆ ಮಲ್ಲಿಕಾರ್ಜುನ್ ಜೊತೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿತ್ತು. ಮಕ್ಕಳಾಗದ ಕಾರಣ ಹಲವು ಆಸ್ಪತ್ರೆ ಸುತ್ತಾಡಿ ತಪಾಸಣೆ ನಡೆಸಿ ಮಕ್ಕಳಾಗುವುದಿಲ್ಲವೆಂದು ನೊಂದಿದ್ದರು. ಇದೇ ಸಮಯದಲ್ಲಿ ಮಂಡ್ಯ ಮೂಲದ ಮಂಜುನಾಥ್ ಹಾಗೂ ಉಡುಪಿ ಮೂಲದ ವಾಣಿ ಎಂಬ ನಕಲಿ ವೈದ್ಯದಂಪತಿ, ಮಮತಾ ಹಾಗೂ ಮಲ್ಲಿಕಾರ್ಜುನ್ ಅವರನ್ನ ಸಂಪರ್ಕಿಸಿ ಮಕ್ಕಳಾಗುವಂತೆ ಐವಿಎಫ್ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿದ್ದಾರೆ.
Advertisement
Advertisement
ಅಲ್ಲದೆ ದಂಪತಿಯಿಂದ 4 ಲಕ್ಷ ಹಣ ಪಡೆದು 4 ತಿಂಗಳ ಕಾಲ ಅವೈಜ್ಞಾನಿಕವಾಗಿ ನಕಲಿ ಐವಿಎಫ್ ಚಿಕಿತ್ಸೆ ನೀಡಿದ್ದಾರೆ. ನಂತರ ನಿಮ್ಮ ಗರ್ಭದಲ್ಲಿ ಮಗು ಬೆಳೆಯುತ್ತಿದೆ ಎಂದು ನಂಬಿಸಿ ಮತ್ತಷ್ಟು ಹಣ ಪಡೆದಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಮಮತಾ ಹೊಟ್ಟೆ ನೋವಿಗೆ ಒಳಗಾಗಿ ಆಸ್ಪತ್ರೆ ದಾಖಲಾದಾಗ ನಕಲಿಗಳ ಅಸಲಿ ಸತ್ಯ ಬಯಲಾಗಿದ್ದು ಮಮತಾ ಗರ್ಭಿಣಿಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
Advertisement
Advertisement
ನಂತರ ತೀವ್ರ ಅನಾರೋಗ್ಯಕ್ಕೆ ಒಳಗಾದ ಮಮತಾ ನಕಲಿ ಚಿಕಿತ್ಸೆಯ ಪರಿಣಾಮವಾಗಿ ಗರ್ಭಕೋಶ, ಕಿಡ್ನಿ, ಹೃದಯ ಹಾಗೂ ಮೆದುಳು ಸಂಬಂಧಿಸಿದ ಖಾಯಿಲೆಗೆ ತುತ್ತಾಗಿದ್ದು ಬೆಂಗಳೂರು ಸೆಂಟ್ ಜಾನ್ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಸತತ ಮೂರು ತಿಂಗಳು ಸುಮಾರು 23ಲಕ್ಷ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಬೇಸತ್ತ ಪತಿ, ಮಮತಾಳನ್ನ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಇಂದು ಬೆಳಗ್ಗೆ ಮಮತಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: 50 KG ನಿಂಬೆಹಣ್ಣನ್ನೇ ಹೊತ್ತೊಯ್ದ ಖತರ್ನಾಕ್ ಕಳ್ಳನ ವೀಡಿಯೋ ವೈರಲ್
ಮಕ್ಕಳಾಸೆಗೆ ನಕಲಿ ವೈದ್ಯ ದಂಪತಿಯ ಮೋಸದ ಜಾಲಕ್ಕೆ ಬಿದ್ದ ಪತಿ ಮಲ್ಲಿಕಾರ್ಜುನ್ ಹಣ ಹಾಗೂ ಪತ್ನಿಯನ್ನ ಕಳೆದು ಕೊಂಡು ಕಣ್ಣಿರಿಡುತ್ತಿದ್ದಾರೆ. ಈ ನಕಲಿ ವೈದ್ಯ ದಂಪತಿ ತಿಪಟೂರು, ತುರುವೇಕೆರೆ ಅರಸೀಕೆರೆ ಭಾಗದ ಹಲವಾರು ಗ್ರಾಮಗಳಲ್ಲಿ ಮಕ್ಕಳಿಲ್ಲದ ದಂಪತಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ನಕಲಿ ಚಿಕಿತ್ಸೆ ನೀಡಿದ್ದು, ಈ ಬಗ್ಗೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಜನವರಿ 19 ರಂದು ನಕಲಿ ವೈದ್ಯರಾದ ವಾಣಿ ಮತ್ತು ಮಂಜುನಾಥ್ ವೈದ್ಯದಂಪತಿ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಾಣಿ ಮತ್ತು ಮಂಜುನಾಥ್ ಕೇವಲ ಎಸ್‍ಎಸ್‍ಎಲ್‍ಸಿ ಪಾಸಾಗಿದ್ದು ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ನಕಲಿ ವೈದ್ಯರನ್ನ ಬಂಧಿಸಿದ್ದ ಪೊಲೀಸರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಮೃತ ಮಮತಾ ಜೊತೆ ಇದೇ ಗ್ರಾಮದ ಹಲವು ದಂಪತಿ ಈ ನಕಲಿ ವೈದ್ಯರಿಂದ ಐವಿಎಫ್ ಚಿಕಿತ್ಸೆ ಪಡೆದ ಮಹಿಳೆಯರು ಆತಂಕ್ಕೆ ಒಳಗಾಗಿದ್ದು, ತಜ್ಞ ವೈದ್ಯರ ಮೊರೆಹೋಗಿದ್ದಾರೆ. ಮಮತಾ ಸಾವಿನ ಬಳಿಕ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್, ಪಬ್‍ಜಿ ಯುವಕರ ದಾರಿ ತಪ್ಪಿಸುತ್ತೆ – ಬ್ಯಾನ್ ಮಾಡಿದ ತಾಲಿಬಾನ್