– ವಾಟ್ಸಾಪ್‌ನಲ್ಲಿ ಡೆತ್‌ನೋಟ್ ಬರೆದಿಟ್ಟ ಮಹಿಳೆ
ಶಿವಮೊಗ್ಗ: ಹೊಳೆಹೊನ್ನೂರು (Holehonnur) ಸಮೀಪ ನವವಿವಾಹಿತೆಯೊಬ್ಬಳು ವಾಟ್ಸಾಪ್‌ನಲ್ಲಿ ಡೆತ್‌ನೋಟ್ ಬರೆದಿಟ್ಟು, ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಭದ್ರಾವತಿ (Bhadravathi) ತಾಲೂಕಿನ ಡಿ.ಬಿ.ಹಳ್ಳಿ ಮೂಲದ ಲತಾ (25) ಆತ್ಮಹತ್ಯೆಗೆ ಶರಣಾದ ಮಹಿಳೆ. ಕಳೆದ ಏಪ್ರಿಲ್ 14 ರಂದು ಶಿಕಾರಿಪುರದ ದಿಂಡದಹಳ್ಳಿ ಗ್ರಾಮದ ಗುರುರಾಜ್ ಜೊತೆ ಆಕೆಯ ಮದುವೆಯಾಗಿತ್ತು. ಗುರುರಾಜ್ ಕೆಪಿಸಿಎಲ್‌ನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ (AEE) ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ (Dowry) ಕಿರುಕುಳ ನೀಡುತ್ತಿದ್ದರು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ವರದಕ್ಷಿಣೆಗಾಗಿ ಪತ್ನಿ ಮೇಲೆ GBA ಮಾರ್ಷಲ್ ದರ್ಪ ಆರೋಪ – ಮಹಿಳೆ ನೇಣಿಗೆ ಶರಣು
ಈ ಸಂಬಂಧ ಗಂಡ ಗುರುರಾಜ್, ಅತ್ತೆ ಶಾರದಮ್ಮ, ನಾದಿನಿ ನಾಗರತ್ನಮ್ಮ, ರಾಜೇಶ್ವರಿ, ಹಾಗೂ ನಾಗರತ್ನಮ್ಮನ ಗಂಡ ಕೃಷ್ಣಪ್ಪ ಸೇರಿ ಐವರ ವಿರುದ್ಧ ಹೊಳೆಹೊನ್ನೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ ಮದುವೆ ಸಂದರ್ಭದಲ್ಲಿ, ಅಳಿಯ ಗುರುರಾಜ್ ಮತ್ತು ಅವರ ಕುಟುಂಬಸ್ಥರ ಬೇಡಿಕೆಯಂತೆ ಚಿನ್ನ ಹಾಗೂ 10 ಲಕ್ಷ ರೂ. ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಸುಮಾರು 20 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದಾಗಿ ಪೋಷಕರು ತಿಳಿಸಿದ್ದಾರೆ.
ಸರ್ಕಾರಿ ಹುದ್ದೆಗೆ ತಕ್ಕಂತೆ ಇನ್ನೋವಾ ಕಾರು ಕೊಡಬೇಕು ಎಂದು ಪೀಡಿಸುತ್ತಿದ್ದರು ಎಂದು ದೂರಲಾಗಿದೆ. ಕಾರು, ಮನೆ ನೀಡದಿದ್ದರೆ ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
ವಾಟ್ಸಾಪ್ ಮೂಲಕ ಲತಾ ಸಂಬಂಧಿಕರಿಗೆ ಕಳುಹಿಸಿದ ಡೆತ್‌ನೋಟ್‌ನಲ್ಲಿ, ಯಾರು ಹುಟ್ಟುತ್ತ ಕೆಟ್ಟವರಾಗಿರುವುದಿಲ್ಲ. ಪ್ರತಿ ಹೆಣ್ಣು ಪುಣ್ಯ ಮಾಡಿ ಗಂಡನ ಮನೆಗೆ ಹೋಗುತ್ತಾಳೆ. ಹೊಸ ಮನೆಗೆ ಹೊಂದಿಕೊಳ್ಳಲು ಸಮಯ ಬೇಕು. ಆ ಸಮಯದಲ್ಲಿ ಮನೆಯ ಉಳಿದವರ ಜೊತೆ ಗಂಡನೂ ದ್ವೇಷಿಸಿದಾಗ ಹೆಣ್ಣು ಬದುಕಿದ್ದೂ ಸತ್ತಂತೆ. ನನ್ನ ಸಾವಿಗೆ ಗುರುರಾಜ್ ಹಾಗೂ ಆ ಐವರೇ ಕಾರಣ, ಅವರಿಗೆ ಶಿಕ್ಷೆಯಾಗಬೇಕು. ಓದುತ್ತಿರುವವರು ನನಗೆ ನ್ಯಾಯ ಕೊಡಿಸಿ ಅಂತಾ ವಾಟ್ಸಾಪ್‌ನಲ್ಲಿ ಸಂದೇಶ ರವಾನಿಸಿದ್ದಾರೆ.
ಡೆತ್ ನೋಟ್ ಸಂದೇಶವನ್ನು ಸಂಬಂಧಿಕರಿಗೆ ಕಳುಹಿಸಿದ್ದ ಲತಾ ಆ ಬಳಿಕ ನಾಪತ್ತೆಯಾಗಿದ್ದರು. ಈ ವಿಷಯ ತಿಳಿಯುತ್ತಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿಗಳ ಜೊತೆಯಲ್ಲಿ ಲತಾಗಾಗಿ ಹುಡುಕಾಟ ನಡೆಸಿದ್ದರು. ಹಂಚಿನ ಸಿದ್ದಾಪುರ ಬಳಿಯ ಭದ್ರಾ ನಾಲೆಯ ಬಳಿ ಲತಾರವರಿಗೆ ಸೇರಿದ ಬಳಿ ಬಟ್ಟೆ, ಮೊಬೈಲ್ ಪತ್ತೆಯಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಹೆಂಡ್ತಿ ಟಾರ್ಚರ್ ಕೊಡ್ತಾಳೆ ಅಂತ ವೀಡಿಯೋ ಮಾಡಿ ರೈಲಿಗೆ ತಲೆಕೊಟ್ಟ ನವವಿವಾಹಿತ

