DistrictsKarnatakaLatestMain PostUdupi

ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

ಉಡುಪಿ: ನಮ್ಮ ಮನೆಯ ಮುಂದೆ ರಸ್ತೆ ಆಗಲಿ, ನಮ್ಮ ಊರು ಉದ್ಧಾರ ಆಗಲಿ ಅಂತ ಎಲ್ಲರೂ ಅಪೇಕ್ಷಿಸುತ್ತಾರೆ. ಆದರೆ ಉಡುಪಿಯ ಆತ್ರಾಡಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನಮ್ಮ ಮನೆಯ ಮುಂದೆ ರಸ್ತೆ ಬೇಡ ಎಂದು ಮಹಿಳೆಯೊಬ್ಬರು ರಂಪಾಟ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪಂಚಾಯಿತಿ ಸದಸ್ಯ ಛತ್ರಿಯ ಹಿಡಿಯಲ್ಲಿ ಮಹಿಳೆಯ ತಲೆ ಒಡೆದಿದ್ದಾರೆ.

ಉಡುಪಿ ಸಮೀಪದ ಆತ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ. ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಲು ತಡೆಯೊಡ್ಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಹಲ್ಲೆ ನಡೆಸಲಾಗಿದೆ. ಆತ್ರಾಡಿ ಸಮೀಪದ ಪಡುಮನೆ ನಾಗಬನ ನಿವಾಸಿ ಆರತಿ(45) ಹಲ್ಲೆಗೊಳಗಾದ ಮಹಿಳೆ. ಆಕೆ ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ.

ಆರತಿಯವರ ಪಟ್ಟಾ ಜಾಗದಲ್ಲಿ ವಿರೋಧದ ನಡುವೆಯೂ ಆತ್ರಾಡಿ ಗ್ರಾಮ ಪಂಚಾಯಿತಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರು ನಡೆಸಿತ್ತು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಪಂಚಾಯಿತಿ ಸದಸ್ಯ ರತ್ನಾಕರ್ ಶೆಟ್ಟಿ ತಳ್ಳಿದ್ದಾರೆ. ಆರತಿ ತನ್ನ ಚಪ್ಪಲಿ ತೆಗೆದು ರತ್ನಾಕರ್ ಶೆಟ್ಟಿ ಮತ್ತು ಪಕ್ಕದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ- ಇಬ್ಬರ ವಿರುದ್ಧ ಎಫ್‍ಐಆರ್

ಕೋಪಗೊಂಡ ಚಂದ್ರಹಾಸ್ ಶೆಟ್ಟಿ ಹಾಗೂ ಸಂತೋಷ್ ಪೂಜಾರಿ ಆರತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಾಗ್ವಾದದ ಸಂದರ್ಭ ರತ್ನಾಕರ್ ಶೆಟ್ಟಿ ಛತ್ರಿಯ ಹಿಡಿಯಲ್ಲಿ ಹೊಡೆದು ಆರತಿಯವರನ್ನು ತಳ್ಳಿದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿದೆ. ಗಲಾಟೆಯನ್ನು ತಡೆಯಲು ಬಂದ ಆರತಿ ಅವರ ಮಗಳ ಮೇಲೂ ಹಲ್ಲೆ ನಡೆಸಲಾಗಿದೆ.

ಇದೀಗ ಆರತಿ ಅವರು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ರತ್ನಾಕರ್ ಶೆಟ್ಟಿ ಮತ್ತು ತಂಡ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಕೊಡಬೇಕಾಗಿದೆ. ಇದನ್ನೂ ಓದಿ: ಕೋರ್ಟ್ ಮುಂದೆಯೇ ರೌಡಿಶೀಟರ್ ಮೇಲೆ ಅಟ್ಯಾಕ್ – ದುಷ್ಕರ್ಮಿಗಳನ್ನು ಹಿಡಿದು ಠಾಣೆಗೆ ದಬ್ಬಿದ ಪೊಲೀಸ್ರು

Live Tv

Leave a Reply

Your email address will not be published.

Back to top button