ಮುಂಬೈ: ರಸ್ತೆಯಲ್ಲಿ ತೆರೆದ ಗುಂಡಿಗೆ ಬೈಕ್ ಅಪ್ಪಳಿಸಿದ ಪರಿಣಾಮ ಮಹಿಳಾ ಬೈಕರ್ ಸಾವನ್ನಪ್ಪಿರುವ ಘಟನೆ ಭಾನುವಾರದಂದು ಮುಂಬೈನಲ್ಲಿ ನಡೆದಿದೆ.
34 ವರ್ಷದ ಮಹಿಳಾ ಬೈಕರ್ ಜಾಗೃತಿ ವಿರಾಜ್ ಹೊಗಾಲೆ ಮೃತ ದುರ್ದೈವಿ. ಜಾಗೃತಿ ಅವರು ಮಹಿಳಾ ಬೈಕರ್‍ಗಳ ಕ್ಲಬ್ ಸದಸ್ಯೆಯಾಗಿದ್ದರು. ವೀಕೆಂಡ್‍ನಲ್ಲಿ ಬೈಕ್ ರೈಡಿಗೆ ಹೋಗಿದ್ದರು. ಭಾನುವಾರ ಸುಮಾರು 9 ಗಂಟೆ ವೇಳೆಯಲ್ಲಿ ಸಣ್ಣಗೆ ಮಳೆಯಾಗುತ್ತಿದ್ದ ವೇಳೆಯೇ ಸ್ನೇಹಿತರೊಂದಿಗೆ ಮುಂಬೈನ ಬಾಂದ್ರಾದಿಂದ ಪ್ರವಾಸಿ ತಾಣವಾದ ಜವ್ಹಾರ್‍ಗೆ ಹೋಗುತ್ತಿದ್ರು.
ಈ ವೇಳೆ ಜಾಗೃತಿ ಟ್ರಕ್‍ವೊಂದನ್ನು ಓವರ್‍ಟೇಕ್ ಮಾಡಲು ಮುಂದಾದಾಗ ತೆರೆದ ಗುಂಡಿಗೆ ಅವರ ಬೈಕ್ ಅಪ್ಪಳಿಸಿದೆ. ಪರಿಣಾಮ ಜಾಗೃತಿ ಬೈಕ್ ನಿಯಂತ್ರಣ ಕಳೆದುಕೊಂಡು ಟ್ರಕ್‍ನಡಿ ಬಿದ್ದಿದ್ದಾರೆ. ಟ್ರಕ್‍ನ ಟಯರ್ ಜಾಗೃತಿ ಅವರ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಾಗೃತಿ ಸ್ನೇಹಿತರು ತಮ್ಮ ಬೈಕ್‍ನಲ್ಲಿ ಹಿಂದೆಯೇ ಬಂದಿದ್ದು, ಅವರು ಬರುವ ವೇಳೆಗಾಗಲೇ ಜಾಗೃತಿ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಟ್ರಕ್ ಚಾಲಕನನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.