ಕೋಲ್ಕತ್ತಾ: ಮಹಿಳೆಯೊಬ್ಬಳ ಮೇಲೆ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಸರ್ಕಾರದ ಯೋಜನೆಯಡಿ ಮನೆ ಪಡೆಯಲು ಗ್ರಾಮ ಪಂಚಾಯತ್ ಸದಸ್ಯನಿಗೆ ಹಣ ನೀಡಿದ್ದಾಳೆ. ಆರೋಪಿ ಕೂಡ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದನು. ಆದರೆ ಗ್ರಾಮ ಪಂಚಾಯತ್ ಸದಸ್ಯ ಮನೆ ಕೊಡಿಸಲು ವಿಳಂಬ ಮಾಡುತ್ತಿದ್ದನು.
ಮಹಿಳೆಗೆ ಈತ ಮನೆ ಕೊಡಿಸುವುದಿಲ್ಲ ಎಂಬ ಅನುಮಾನ ಬಂದಿದೆ. ತಕ್ಷಣ ತನ್ನ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ. ಪದೆ ಪದೇ ಹಣವನ್ನು ವಾಪಸ್ ಕೊಡುವಂತೆ ಸಂತ್ರಸ್ತೆ ಒತ್ತಡ ಹಾಕಿದ್ದಾಳೆ. ಆಗ ಆರೋಪಿ ಹಣ ಕೊಡುವುದಾಗಿ ಹೇಳಿ ನಿರ್ಜನ ಪ್ರದೇಶದಲ್ಲಿ ಕರೆದಿದ್ದಾನೆ. ಸಂತ್ರಸ್ತೆ ಅಲ್ಲಿಗೆ ಹೋದ ತಕ್ಷಣ ಗ್ರಾಮ ಪಂಚಾಯತ್ ಸದಸ್ಯ ಸೇರಿ ನಾಲ್ವರು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೊಬ್ಬ ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.