ನವದೆಹಲಿ: ಜೈಲಿನೊಳಗೆ ಜೀವನ ಹೇಗಿರುತ್ತೆ. ಅಲ್ಲಿ ಕೈದಿಗಳು ಯಾವ ರೀತಿ ಇರ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಇರುತ್ತೆ. ಇದನ್ನ ತಿಳ್ಕೋಬೇಕು ಅನ್ನೋರಿಗೆ ಇನ್ಮುಂದೆ ಅವಕಾಶ ಸಿಗಲಿದೆ.
ದೆಹಲಿಯಲ್ಲಿರುವ ದೇಶದ ಅತೀ ದೊಡ್ಡ ತಿಹಾರ್ ಜೈಲಿಗೆ ಅಪರಾಧ ಮಾಡದೇ ಸಾಮಾನ್ಯ ಜನರು ಕೂಡ ಹೋಗುವಂತಹ ಅವಕಾಶವನ್ನು ತಿಹಾರ್ ಜೈಲಿನ ಅಧಿಕಾರಿಗಳು ನೀಡಲು ಮುಂದಾಗಿದ್ದಾರೆ.
ದೇಶದ ಅತೀ ದೊಡ್ಡ ಕ್ರಿಮಿನಲ್‍ಗಳಾದ ಉಗ್ರ ಯಾಸೀನ್ ಭಟ್ಕಳ್, ಭೂಗತ ಪಾತಕಿ ಛೋಟಾ ರಾಜನ್, ಶಹಾಬುದ್ದೀನ್ ಮುಂತಾದ ಕ್ರಿಮಿನಲ್ಸ್ ಈ ಜೈಲಿನಲ್ಲಿದ್ದಾರೆ. ಈ ಜೈಲಿಗೆ ಇನ್ನು ಕೆಲವು ತಿಂಗಳಿನಲ್ಲಿ ಅತಿಥಿಯಾಗಿ ಸಾಮಾನ್ಯ ಜನರು ಹೋಗಬಹುದು ಎಂದು ಜೈಲಿನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ಜೈಲಿಗೆ ಹೋಗಲು ನೀವು ಅಪರಾಧ ಮಾಡಿ ಕೈದಿಯಾಗಿ ಹೋಗಲೇಬೇಕೆಂದೇನಿಲ್ಲ.’ಫೀಲ್ ಲೈಕ್ ಜೈಲ್’ ಎಂಬ ಯೋಜನೆಯನ್ನ ತರಲು ಚಿಂತಿಸಲಾಗ್ತಿದೆ. ಈ ಜೈಲಿನ ಒಳಗೆ ಹೋಗಲು ಪ್ರವೇಶ ಶುಲ್ಕ ಕಟ್ಟಿ ಜೈಲಿನ ಅನುಭವನ್ನು ಪಡೆಯಬಹುದು. ಈ ಜೈಲಿಗೆ ಹೋಗಬೇಕೆಂದರೆ ಕೈದಿಗಳಂತೆ ಬಟ್ಟೆ ಧರಿಸಬೇಕು, ಅವರು ಮಾಡುವಂತಹ ಕೆಲಸಗಳು ಎಂದರೆ ಕೂಲಿ ಕೆಲಸ, ತೋಟಗಾರಿಕೆ, ಮರಗೆಲಸವನ್ನು ಮಾಡಬೇಕು ಎಂದು ಅಧಿಕಾರಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಎಲೆಕ್ಟ್ರಾನಿಕ್ಸ್ ಉಪಕರಣ ಎಂದರೆ ಮೊಬೈಲ್ ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
400 ಎಕರೆ ಪ್ರದೇಶದಲ್ಲಿರುವ ಈ ಜೈಲಿನಲ್ಲಿ ಕೈದಿಗಳು ತಯಾರಿಸುವ ಆಹಾರವನ್ನೇ ಸೇವಿಸಬೇಕು ಹಾಗೂ ಈ ಜೈಲಿನಲ್ಲಿ ಇರುವಾಗ ಇತರೆ ಕೈದಿಗಳನ್ನು ಮಾತನಾಡಿಸುವಂತಿಲ್ಲ. ಈ ತಿಹಾರ್ ಜೈಲನ್ನು ಹೆಡ್ ಕ್ವಾಟರ್ ಆಗಿ ಮಾಡಲಿದ್ದು, ಈ ಜೈಲಿಗೆ ಹೋಗುವ ಅತಿಥಿಗಳು ಕೈದಿಗಳಂತೆಯೇ ಎಲ್ಲ ನಿಯಮವನ್ನು ಪಾಲಿಸಬೇಕು ಹಾಗೂ ಅವರಿಗೆ ಹಾಜರಾತಿ ಕೂಡ ಇರುತ್ತದೆ. ಶೀಘ್ರದಲ್ಲೇ ಇದರ ಬಗ್ಗೆ ಎಲ್ಲ ಮಾಹಿತಿ ಹೇಳುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ 2016ರಲ್ಲಿ ತೆಲಂಗಾಣದ ಸಂಗರೆಡ್ಡಿಯಲ್ಲಿ 220 ವರ್ಷದಷ್ಟು ಹಳೆಯ ಜೈಲಿನಲ್ಲಿ ಈ ರೀತಿ ಯೋಜನೆಯೊಂದನ್ನು ಶುರು ಮಾಡಲಾಗಿತ್ತು. ಆ ಜೈಲನ್ನು ವಸ್ತು ಸಂಗ್ರಹಾಲಯವನ್ನಾಗಿ ಬದಲಾಯಿಸಲಾಗಿತ್ತು. ತೆಲಂಗಾಣ ಸರ್ಕಾರ ಕೂಡ ಈ ಜೈಲನ್ನು ಪ್ರವಾಸೋದ್ಯಮದ ಭಾಗವನ್ನಾಗಿ ಮಾಡಿದೆ. ಈ ಜೈಲಿಗೆ ಭೇಟಿ ನೀಡಲು ದಿನಕ್ಕೆ 500 ರೂ. ಪ್ರವೇಶ ಶುಲ್ಕವನ್ನು ನೀಡಬೇಕು. ಅಷ್ಟೇ ಅಲ್ಲದೇ ಕಳೆದ ವರ್ಷ ಮಲೇಷ್ಯಾದ ಇಬ್ಬರು ಪ್ರವಾಸಿಗರು ಈ ಜೈಲಿಗೆ ಭೇಟಿ ನೀಡಿ ಭಾರತೀಯ ಜೈಲು ಹೇಗಿರುತ್ತದೆ ಎಂಬ ಅನುಭವವನ್ನು ಪಡೆದುಕೊಂಡರು.