ಮಂಡ್ಯ ಸೀಮೆಯ ಜನಜೀವನ, ಭಾಷೆಯ ಶೈಲಿಗೆ ಯಾವ ಕಥೆಯನ್ನು ಹಬ್ಬಿಸಿದರೂ ಹುಲುಸಾಗಿ ಮೈಚಾಚಿಕೊಳ್ಳುತ್ತದೆ. ಅಷ್ಟಕ್ಕೂ ಹಳ್ಳಿ ಸೊಗಡೆಂದರೇನೇ ಮಂಡ್ಯ ಭಾಗದ ಚಿತ್ರ ಕದಲುವಷ್ಟರ ಮಟ್ಟಿಗೆ ಆ ಭಾಗದ ದೃಶ್ಯಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಲಾಗಿದೆ. ಇದೀಗ ಅದೇ ಭಾಗದಲ್ಲಿ ಜರುಗುವ ಪ್ರೇಮ ಕಥೆಯನ್ನೊಳಗೊಂಡಿರುವ `ಮಂಡ್ಯ ಹೈದ’ (Mandya Hyda) ಚಿತ್ರದ ಮೂಲಕ ಪ್ರತಿಭಾನ್ವಿತ ಯುವ ನಿರ್ದೇಶಕ ವಿ. ಶ್ರೀಕಾಂತ್ (V. Srikanth) ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದುಕೊಂಡು, ಅನೇಕ ಹಿಟ್ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಈ ಹಳ್ಳಿ ಹೈದನನ್ನು ವಿಶೇಷವಾಗಿ ರೂಪಿಸಿದ್ದಾರೆಂಬುದಕ್ಕೆ ಇತ್ತೀಚೆಗೆ ಬಿಡುಗಡೆಗೊಂಡಿರುವ ಟ್ರೈಲರ್ ಸಾಕ್ಷಿಯಂತಿದೆ.
Advertisement
ಇಂಜಿನಿಯರಿಂಗ್ ಪದವೀಧರರಾಗಿರುವ ನಿರ್ದೇಶಕ ವಿ. ಶ್ರೀಕಾಂತ್ ಎಲ್ಲ ಅಂಶಗಳನ್ನೂ ಬೆರೆಸಿ, ಅತ್ಯಂತ ಸೂಕ್ಷ್ಮ ದೃಷ್ಟಿಕೋನದಿಂದ ಈ ಸಿನಿಮಾವನ್ನು ರೂಪಿಸಿದ್ದಾರಂತೆ. ಇಂಜಿನಿಯರಿಂಗ್ ಪದವಿ ಪೂರೈಸಿಕೊಂಡು, ಬದುಕನ್ನು ಆ ಕ್ಷೇತ್ರದಲ್ಲಿಯೇ ನೆಲೆಗಾಣಿಸಿಕೊಳ್ಳುವ ಅಕಾಶವಿದ್ದರೂ ತಮ್ಮ ಆಂತರ್ಯದ ಕನಸಿನ ಕರೆಗೆ ಓಗೊಟ್ಟವರು ಶ್ರೀಕಾಂತ್. ಆ ಸೆಳವಿಗೆ ಸಿಕ್ಕು ಚಿತ್ರರಂಗಕ್ಕೆ ಅಡಿಯಿರಿಸಿ ಹಂತ ಹಂತವಾಗಿ ಸಾಗಿ ಬಂದಿರುವ ಅವರ ಕನಸಿನ ಹಾದಿ ಮಂಡ್ಯ ಹೈದನ ಮೂಲಕ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ. ಇಷ್ಟು ವರ್ಷಗಳ ಈ ಯಾನದಲ್ಲಿ ಸಿನಿಮಾದ ಪಟ್ಟುಗಳ ಜೊತೆಗೆ, ಪ್ರೇಕ್ಷಕರ ಮನೋಭೂಮಿಕೆಯನ್ನೂ ಕೂಡಾ ಚೆಂದಗೆ ಅರ್ಥ ಮಾಡಿಕೊಂಡು, ಅದಕ್ಕನುಸಾರವಾಗಿ ಮಂಡ್ಯ ಹೈದನನ್ನು ರೂಪಿಸಿದ್ದಾರಂತೆ.
Advertisement
Advertisement
ಲವ್, ಕಾಮಿಡಿ, ಮಾಸ್ ಸನ್ನಿವೇಶಗಳು ಮತ್ತು ಕಣ್ಣಿಗೆ ಹಾಯೆನಿಸುವ ಹಳ್ಳಿ ಸೊಗಡು. ಇವಿಷ್ಟನ್ನು ಸದಾ ಕಾಲವೂ ಪ್ರೇಕ್ಷಕರನ್ನು ಸೆಳೆಯುತ್ತವೆ. ಅವೆಲ್ಲವೂ ಒಂದೇ ಸಿನಿಮಾದಲ್ಲಿದ್ದು ಬಿಟ್ಟರೆ ಪ್ರೇಕ್ಷಕರ ಪಾಲಿಗೆ ಅಕ್ಷರಶಃ ಫುಲ್ ಮೀಲ್ಸ್ ಸಿಕ್ಕಿತೆಂದೇ ಅರ್ಥ. ಅಂಥಾದ್ದೊಂದು ಪರಿಪೂರ್ಣ ಮನೋರಂಜನೆಯನ್ನು ಪ್ರತೀ ನೋಡುಗರಿಗೂ ಹಳ್ಳಿ ಹೈದ ಕೊಡಲಿದ್ದಾನೆಂಬುದು ನಿರ್ದೇಶಕರ ಭರವಸೆ. ಮೇಲು ನೋಟಕ್ಕೆ ಪ್ರೀತಿ ಮತ್ತು ಮನೋರಂಜನಾತ್ಮಕ ಗುಣಗಳ ಕಥೆಯಾಗಿ ಕಂಡರೂ, ಅದನ್ನು ಎಲ್ಲರ ಬದುಕಿಗೂ ಹತ್ತಿರಾಗುವಂತೆ, ಪ್ರತಿಯೊಬ್ಬರನ್ನೂ ಕಾಡುವಂತೆ ರೂಪಿಸಲಾಗಿದೆಯಂತೆ.
Advertisement
ಕಥೆ, ಸ್ಕ್ರೀನ್ ಪ್ಲೇ ಸೇರಿದಂತೆ ಎಲ್ಲ ವಿಚಾರಗಳಲ್ಲಿಯೂ ಹೊಸತೆನ್ನಿಸುವಂತೆ ಶ್ರೀಕಾಂತ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ. ಈಗಾಗಲೇ ಹಳ್ಳಿ ಹೈದ ಹಾಡುಗಳ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿದ್ದಾನೆ. ಟ್ರೈಲರ್ ನೋಡಿದ ಮೇಲಂತೂ ಈ ಸಿನಿಮಾದಲ್ಲಿ ಗಹನವಾದುದೇನೋ ಇದೆಯೆಂಬ ಸ್ಪಷ್ಟ ಅಂದಾಜು ಪ್ರೇಕ್ಷಕರಿಗೆ ಸಿಕ್ಕಿದೆ. ವಿಶೇಷವೆಂದರೆ, ಹಳ್ಳಿ ಹೈದನನ್ನು ಮನೋರಂಜನೆಯ ವಿಚಾರದಲ್ಲಿಯೂ ಅಕ್ಷರಶಃ ಹಬ್ಬವೆಂಬಂತೆ ರೂಪಿಸಲಾಗಿದೆ. ಕಿರುತೆರೆಯ ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಕಲಾವಿದರ ದಂಡೇ ಈ ಸಿನಿಮಾ ಭಾಗವಾಗಿದೆ.
ಈ ಹಿಂದೆ ಕಿನಾರೆಯಂಥಾ ಸಿನಿಮಾ ಮೂಲಕ ಗಮನ ಸೆಳೆದಿದ್ದ ಸುರೇಂದ್ರನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕವಿರತ್ನ ವಿ ನಾಗೇಂದ್ರ ಪ್ರಸಾದ್, ವೆಂಕಟೇಶ್ ಕುಲಕರ್ಣಿ, ರವಿ ತಪಸ್ವಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಹೊಸಾ ಪ್ರತಿಭೆ ಮನುಗೌಡ ಛಾಯಾಗ್ರಾಹಕನಾಗಿ ಈ ಸಿನಿಮಾ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಬಾಲ ರಾಜವಾಡಿ (Bala Rajwadi), ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನೋಹರ್, ಪ್ರವೀಣ್ ಜೈನ್, ಗಜೇಂದ್ರ ಮುಂತಾದವರ ತಾರಾಗಣವಿದೆ. ಅಂದಹಾಗೆ, ಮಂಡ್ಯ ಹೈದ ಚಿತ್ರ ಇದೇ ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.