ಪೆಟ್ರೋಲ್‌, ಡೀಸೆಲ್‌ ಬಳಿಕ ಬಸ್‌ ಟಿಕೆಟ್‌ ದರ ಏರಿಕೆಯಾಗುತ್ತಾ? – ಸಿಎಂ ಕೊಟ್ಟ ಉತ್ತರ ಏನು?

Public TV
3 Min Read
Siddaramaiah 2

– ಗ್ಯಾರಂಟಿ ಯೋಜನೆಗೆ ಹಣವಿಲ್ಲ ಅಂತ ತೈಲ ಬೆಲೆ ಏರಿಸಿಲ್ಲ

ಬೆಂಗಳೂರು: ವೇತನ ಕೊಡಲು ದುಡ್ಡಿಲ್ಲ ಅಂತಲೋ, ಗ್ಯಾರಂಟಿ ಯೋಜನೆಗೆ (Congress Gurantee) ಹಣ ಇಲ್ಲ ಅಂತಲೋ ತೆರಿಗೆ ಹೆಚ್ಚಿಸಿದ್ದಲ್ಲ. ಹಾಗೆಂದು ಕರ್ನಾಟಕದಲ್ಲಿ ಆರ್ಥಿಕ ಸಂಪನ್ಮೂಲ ತುಂಬಿ ತುಳುಕುತ್ತಿದೆ ಅಂತಲೂ ಅಲ್ಲ. ಅಭಿವೃದ್ಧಿಗಾಗಿ ಸಂಪನ್ಮೂಲ ಕ್ರೋಢೀಕರಣ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ (Petrol, Diesel Price) ಬೆಲೆ ಏರಿಕೆ ಬಳಿಕ ಮುಂದೆ ಯಾವುದು ಏರಿಕೆ ಮಾಡ್ತಾರೆ ಎಂಬ ಅಂತಕ ಜನರಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಜನರಿಗೆ ತೊಂದರೆ ಆಗುವ ರೀತಿ ಯಾವುದೇ ತೆರಿಗೆ ಹೆಚ್ಚಳ ಮಾಡಲ್ಲ ಎಂದಿದ್ದಾರೆ. ಇದೇ ವೇಳೆ ಬಸ್ ಟಿಕೆಟ್ ದರ ಏರಿಕೆಯಾಗುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿ, ಹಿಂದೆ ಯಾವಾಗ ಟಿಕೆಟ್ ದರ ಏರಿಕೆ ಯಾಗಿದೆ ಗೊತ್ತಾ? ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ. ಇನ್ನೂ ಇಲಾಖೆ ಜೊತೆ ಚರ್ಚೆ ಮಾಡಬೇಕು ಎಂದಿದ್ದಾರೆ.

ಅಂಬಾನಿ-ಅದಾನಿ ಸಾಲ ಮನ್ನಾ ಮಾಡಿದ್ದೇವಾ?
ಈ ಲೋಕಸಭಾ ಚುನಾವಣೆಯಲ್ಲಿ ನಮಗೆ ಮತ ಹೆಚ್ಚಾಗಿದೆ. 1 ಸೀಟಿನಿಂದ 9 ಸೀಟು ಆಯಿತು. ಸೋತವರು ನಾವೋ? ಅವರೋ? ಅಂತಾ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಈಗ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಅನ್ನುತ್ತಾರೆ. ಗ್ಯಾರಂಟಿ ಯೋಜನೆಗೆ 60 ಸಾವಿರ ಕೋಟಿ ರೂ. ಬೇಕು. ನಮ್ಮ ತೀರ್ಮಾನವನ್ನು ಹೊಗಳಬೇಕು. ಮೋದಿ ತರ ಅದಾನಿ-ಅಂಬಾನಿಯ ಸಾಲ ಮನ್ನಾ ಮಾಡುತ್ತಿದ್ದೇವಾ? ಅಂತಾ ಖಾರವಾಗಿ ಪ್ರಶ್ನಿಸಿದ್ದಾರೆ.

ಅಭಿವೃದ್ಧಿಗೆ ತೆರಿಗೆ ಬೇಕಲ್ಲವೇ?
ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ 102.82 ರೂ. ಇತ್ತು. ಕೇರಳದಲ್ಲಿ 106 ರೂ., ಆಂಧ್ರದಲ್ಲಿ 109 ರೂ. ತೆಲಂಗಾಣದಲ್ಲಿ 107 ರೂ. ಮಹಾರಾಷ್ಟ್ರದಲ್ಲಿ 104 ರೂ. ತಮಿಳುನಾಡಿನಲ್ಲಿ 102 ರೂ. ಇದೆ. ರಾಜಸ್ತಾನ, ಮಧ್ಯ ಪ್ರದೇಶ, ಗುಜರಾತ್‌ನಲ್ಲಿ 94 ರೂ. ಇದೆ. ಅಲ್ಲಿ ಸಾಗಣೆ ವೆಚ್ಚ ಇಲ್ಲ. ಅಲ್ಲಿ ಡೀಸೆಲ್ ವೆಚ್ಚ ಹೆಚ್ಚಿದೆ. ರಾಜ್ಯದ ಅಭಿವೃದ್ಧಿಗೆ ತೆರಿಗೆ ಬೇಕಲ್ಲವೇ? ಬೇರೆ ರಾಜ್ಯದಲ್ಲಿ ತೆರಿಗೆ ಪ್ರಮಾಣ ಜಾಸ್ತಿ ಇದೆ. ನಾವು ಸ್ವಲ್ಪ ಜಾಸ್ತಿ ಮಾಡೋಣ ಅಂತ ಮಾಡಿದೆವು. ಬಿಜೆಪಿಯವರಿಗೆ ಪ್ರತಿಭಟಿಸುವ ನೈತಿಕತೆ ಇಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ಕೇಂದ್ರ ಸರ್ಕಾರ ಜಿಎಸ್‌ಟಿ ತಂದ್ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಅಧಿಕಾರ ಇಲ್ಲ. ಪೆಟ್ರೋಲ್, ಡೀಸೆಲ್‌ ಮೇಲಿನ ಸೆಸ್ ವಿಧಿಸುವ ಅಧಿಕಾರ, ಅಬಕಾರಿ ಸುಂಕ, ಸ್ಟ್ಯಾಂಪ್ ಡ್ಯೂಟಿ ವಿಧಿಸುವ ಅಧಿಕಾರ ಮಾತ್ರ ರಾಜ್ಯ ಸರ್ಕಾರಕ್ಕೆ ಇದೆ. ಉಳಿದೆಲ್ಲ ತೆರಿಗೆಯನ್ನ ಅವರೇ ವಿಧಿಸ್ತಾರೆ. ಕರ್ನಾಟಕ ಸರ್ಕಾರ ಪಾಪರ್ ಅಂತೆ, ಪಾಪರ್ ಅಂತಾ ಡಿಕ್ಲೇರ್ಡ್ ಯಾರು ಮಾಡೋದು? ಪಾಪರ್ ಅಂದ್ರೆ ಅರ್ಥ ಗೊತ್ತಾ ಅಶೋಕನಿಗೆ? ನಾವು ಯಾವುದಾದ್ರೂ ಸಂಬಳ ಕೊಡೋದನ್ನ ನಿಲ್ಲಿಸಿದ್ದೀವಾ? ಅಂತ ಸಿಎಂ ಕಿಡಿಕಾರಿದ್ದಾರೆ.

5495 ಕೋಟಿ ರೂ. ತೆರಿಗೆ ಪಾಲು ಕಡಿಮೆ ಆಗಿದೆ. ವಿಶೇಷ ಅನುದಾನ ಘೋಷಣೆ ಮಾಡಿ ಹಣ ಕೊಡಲಿಲ್ಲ. ನಿರ್ಮಲಾ ಸೀತಾರಾಮನ್ ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಅನುದಾನ, ಬೆಂಗಳೂರು ಪೆರಿಫಿರಲ್ ರಿಂಗ್ ರೋಡ್ ಅನುದಾನ ಕೊಡಲಿಲ್ಲ. ಇವರು ಯಾರ ಬಗ್ಗೆ ಪ್ರತಿಭಟನೆ ಮಾಡಬೇಕು ಅಂತ ವ್ಯಂಗ್ಯವಾಡಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಹಣ ಕಡಿಮೆ ಆಯ್ತು. ಇದರ ಬಗ್ಗೆ ಒಂದು ದಿವಸ ಒಬ್ಬರೂ ಮಾತನಾಡಲಿಲ್ಲ. ಬರಗಾಲದ ಪರಿಹಾರ ಹಣ ಪಡೆಯಬೇಕು ಅಂದ್ರೆ ಕೋರ್ಟ್‌ಗೆ ಹೊಗಬೇಕಾಯ್ತ. ಕೋರ್ಟ್ ಹೇಳಿದ ಮೇಲೆ 3,500 ಕೋಟಿ ರೂ. ಬಂತು. ನಾವು ಕೇಳಿದ್ದು 18,000 ಕೋಟಿ ರೂ. ನಿಜವಾಗಿ ಬಡವರ ಕಾರ್ಯಕ್ರಮಕ್ಕೆ ವಿರೋಧ ಮಾಡ್ತಿರೋದು ಬಿಜೆಪಿ ಎಂದು ತಿರುಗೇಟು ನೀಡಿದ್ದಾರೆ.

Share This Article