15 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಟ್ಯಾಂಕರ್‌ನೊಂದಿಗೆ ಬರೋದಾಗಿ ಎಚ್ಚರಿಕೆ
ನವದೆಹಲಿ: ರಾಷ್ಟ್ರ ರಾಜಧಾನಿಯ ನಿವಾಸಿಗಳಿಗೆ ಪೂರೈಕೆಯಾಗುತ್ತಿರುವ ನೀರಿನ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ (AAP) ಸಂಸದೆ ಸ್ವಾತಿ ಮಲಿವಾಲ್ (Swati Maliwal), ಬಾಟಲಿಯಲ್ಲಿ ಕಲುಷಿತ ನೀರನ್ನು ತುಂಬಿಸಿ ದೆಹಲಿ ಸಿಎಂ ಅತಿಶಿಯವರ (Atishi) ನಿವಾಸದ ಹೊರಗೆ ಸುರಿದಿದ್ದಾರೆ.
ದ್ವಾರಕಾ ನಿವಾಸಿಗಳ ಮನೆಗಳನ್ನು ಸಮೀಕ್ಷೆ ಮಾಡಿ, ಸರಬರಾಜಾಗುತ್ತಿರುವ ನೀರಿನ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಗಿದೆ. ಜನರಿಗೆ ಕೊಳಕು, ದುರ್ವಾಸನೆಯ ನೀರು ಸರಬರಾಜು ಮಾಡಲಾಗುತ್ತಿದೆ. ಇದನ್ನು ಸಿಎಂ ಗಮನಕ್ಕೆ ತರಲು ಮನೆಯೊಂದರ ನಲ್ಲಿ ನೀರನ್ನು ಬಾಟಲಿಯಲ್ಲಿ ಸಂಗ್ರಹಿಸಿ ದೆಹಲಿ ಮುಖ್ಯಮಂತ್ರಿಯ ನಿವಾಸದ ಹೊರಗೆ ಸುರಿದಿದ್ದಾರೆ.
ಬಳಿಕ ಮಾತನಾಡಿ, ಸಾಗರಪುರ, ದ್ವಾರಕಾದ ಜನರು ನೀರಿನ ಸಮಸ್ಯೆ ವಿಚಾರವಾಗಿ ನನಗೆ ಕರೆ ಮಾಡಿದ್ದರು. ನಾನು ಒಂದು ಮನೆಗೆ ಹೋದೆ, ಅಲ್ಲಿ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ನಾನು ಆ ಕಲುಷಿತ ನೀರನ್ನು ಬಾಟಲಿಯಲ್ಲಿ ತುಂಬಿಸಿ ಆ ನೀರನ್ನು ಇಲ್ಲಿಗೆ ತಂದಿದ್ದೇನೆ. ಜನರಿಗೆ 2015ರಿಂದಲೂ ಮುಂದಿನ ವರ್ಷ ಎಲ್ಲವೂ ಸರಿಹೋಗುತ್ತದೆ ಎಂದು ಕೇಳುತ್ತಲೇ ಇದ್ದೇವೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ಪ್ರದೇಶದಲ್ಲಿ ನೀರು ಪೂರೈಕೆಯ ಸ್ಥಿತಿ 15 ದಿನಗಳಲ್ಲಿ ಸುಧಾರಿಸದಿದ್ದರೆ, ಈಗ ಬಾಟಲಿಯಲ್ಲಿ ತಂದಿದ್ದೇನೆ. ಇನ್ನೂ ದುರ್ವಾಸನೆ ಬೀರುವ ನೀರಿನ ಟ್ಯಾಂಕರ್‌ನೊಂದಿಗೆ ಹಿಂತಿರುಗಿ ಬರುವುದಾಗಿ ಅವರು ಎಚ್ಚರಿಸಿದ್ದಾರೆ.