ನಿಮ್ಮನ್ನು ಕಂಗೆಡಿಸಲು ನನ್ನ ಒಂದು ಟ್ವೀಟ್ ಸಾಕು: ಪಾಕ್ ಸಚಿವನಿಗೆ ತಿರುಗೇಟು ನೀಡಿದ್ದ ಸುಷ್ಮಾ

Public TV
2 Min Read
favad sushma

ಇಸ್ಲಾಮಾಬಾದ್: ನಿಮ್ಮ ಜೊತೆ ಟ್ವಿಟ್ಟರ್ ಜಗಳ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನದ ಸಚಿವರೊಬ್ಬರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಸುಷ್ಮಾ ಸ್ವರಾಜ್ ಅವರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಟ್ವಿಟ್ಟರಿನಲ್ಲಿ ನಾನು ಸುಷ್ಮಾ ಅವರ ಜೊತೆ ಆಡುತ್ತಿದ್ದ ಜಗಳವನ್ನು ಮಿಸ್ ಮಾಡಿಕೊಳ್ಳುತ್ತೇನೆ. ಸುಷ್ಮಾ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

2019ರಲ್ಲಿ ಇಬ್ಬರು ಹಿಂದೂ ಬಾಲಕಿಯರ ಅಪಹರಣ ಮಾಡಿ ಬಲವಂತವಾಗಿ ಮತಾಂತರ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ವಿಷಯಕ್ಕಾಗಿ ಫವಾದ್ ಹುಸೇನ್ ಹಾಗೂ ಸುಷ್ಮಾ ಸ್ವರಾಜ್ ಅವರ ನಡುವೆ ಟ್ವಿಟ್ಟರಿನಲ್ಲಿ ಜಗಳ ನಡೆದಿತ್ತು.

ಪಾಕ್‍ನ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಆಚರಣೆಯಲ್ಲಿ ತೊಡಗಿದ್ದ ಯುವತಿಯನ್ನು ಅಪಹರಣ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೇ ಹಿಂದೂ ಸಮುದಾಯ ಈ ಘಟನೆಯ ಬಗ್ಗೆ ಪ್ರತಿಭಟನೆ ನಡೆಸಿ ಕೃತ್ಯ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಹಿಂದೂ ಸಮುದಾಯ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸುಷ್ಮಾ ಸ್ವರಾಜ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಪಾಕಿಸ್ತಾನದ ಭಾರತೀಯ ಹೈಕಮಿಷನರ್ ಗೆ ಈ ಬಗ್ಗೆ ವರದಿ ಕಳುಹಿಸಲು ಕೇಳಿದ್ದೇನೆ. ಪಾಕ್‍ನ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಆಚರಿಸುವಾಗ ಇಬ್ಬರು ಹಿಂದೂ ಯುವತಿಯರ ಅಪಹರಣ ಮಾಡಲಾಗಿದೆ” ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್‍ಗೆ ಸಚಿವ ಫವಾದ್ ಹುಸೇನ್, “ಮೆಡಮ್ ಇದು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯ. ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲು ಇದು ಮೋದಿ ಅವರ ಭಾರತ ಅಲ್ಲ. ಇದು ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನ. ನಮ್ಮ ರಾಷ್ಟ್ರಧ್ವಜದ ಬಿಳಿ ಬಣ್ಣ ನಮಗೆ ಪ್ರಿಯವಾಗಿದೆ. ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ ವಿಷಯದಲ್ಲಿ ನೀವು ಇದೇ ಪರಿಶ್ರಮದಿಂದ ವರ್ತಿಸುವಿರಿ ಎಂದು ನಾನು ಭಾವಿಸುತ್ತೇನೆ” ಎಂದು ರೀ-ಟ್ವೀಟ್ ಮಾಡಿದ್ದರು.

ಫವಾದ್ ಹುಸೇನ್ ಅವರ ಟ್ವೀಟ್‍ಗೆ ಸುಷ್ಮಾ ಅವರು, “ನಾನು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್ ಗೆ ವರದಿ ಕೇಳಿದ್ದೇನೆ ಅಷ್ಟೇ. ನಿಮ್ಮನ್ನು ಕಂಗೆಡಿಸಲು ಇದು ಸಾಕು. ಇದು ನಿಮ್ಮ ತಪ್ಪಿತಸ್ಥ ಭಾವನೆ ತೋರಿಸುತ್ತಿದೆ” ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *