ಕೊಪ್ಪಳ: ರೆಬೆಲ್ ಸಂಸದ ಕರಡಿ ಸಂಗಣ್ಣ ನಿವಾಸಕ್ಕೆ ಲಕ್ಷ್ಮಣ ಸವದಿ (Laxman Savadi) ಭೇಟಿ ನೀಡಿದ್ದಾರೆ. ಈ ಮೂಲಕ ಕರಡಿ ಸಂಗಣ್ಣ ಅವರು ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆ ಇದೀಗ ಎದ್ದಿದೆ.
ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಧಾನಗೊಂಡಿರುವ ಸಂಗಣ್ಣ ಕರಡಿ (Sanganna Karadi) ಅವರು ಬಿಜೆಪಿ ಪ್ರಚಾರದಿಂದ ದೂರ ಉಳಿದಿದ್ದಾರೆ. ಈ ಹಿನ್ನಲೆಯಲ್ಲಿ ಕರಡಿ ಸಂಗಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಸವದಿ ಭೇಟಿ ಈ ವದಂತಿಗೆ ಪುಷ್ಟಿ ನೀಡಿದೆ.
ಬೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸವದಿ, ಕಾಂಗ್ರೆಸ್ ಪಕ್ಷಕ್ಕೆ ಬರೋದರ ಬಗ್ಗೆ ನಾವು ಮಾತಾಡಿಲ್ಲ. ಅದಕ್ಕೆ ಇನ್ನೂ ಸಮಯ ಇದೆ ಅದನ್ನ ಸಂಗಣ್ಣ ಅವರು ತೀರ್ಮಾನ ಮಾಡ್ತಾರೆ. ಅವರೂ ರಾಜಕೀಯ ನೆಲೆ ಹುಡುಕಿ ಕೊಳ್ಳಬೇಕು ಅದನ್ನ ಅವರು ಹಾಗೂ ಅವರ ಕುಟುಂಬ ಸದಸ್ಯರು ತೀರ್ಮಾನ ಮಾಡ್ತಾರೆ ಎಂದರು.
ನಾನು ಪಕ್ಷಕ್ಕೆ ಯಾವುದೇ ಆಹ್ವಾನ ಕೊಟ್ಟಿಲ್ಲ ಅದರ ಬಗ್ಗೆ ಚರ್ಚೆ ಕೂಡಾ ಮಾಡಿಲ್ಲ. ಅವರಿಗೆ ಒಳ್ಳೆಯ ಸೂಕ್ತ ಸ್ಥಾನ ಮಾನ ಸಿಗಲಿ ಅನ್ನೋದು ನನ್ನ ಆಸೆ. ಬಂಗಾರ ಯಾರ ಅಂಗಡಿಯಲ್ಲಿ ಇದ್ರೂ ಬಂಗಾರ, ಕುದುರೋ ಓಡತ್ತೆ ಅಂದ್ರೆ ಎಲ್ಲರೂ ಜಿದ್ದು ಕಟ್ಟೋರೇ. ಬಿಜೆಪಿಗೆ ವಿನಾಶಕಾಲೆ ವಿಪರೀತ ಬುದ್ದಿ, 28 ಸೀಟ್ ಗೆಲ್ಲೋದು ಗೋವಾ, ತಮಿಳುನಾಡು ಸೇರಿ ಹೇಳ್ತಿರಬಹುದು ಎಂದು ತಿಳಿಸಿದರು.
ಇದೇ ವೇಳೆ ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರು ಅನುಭವಸ್ಥರು ಅವರು ಹೆಣ್ಣು ಮಕ್ಕಳ ಬಗೆ ಮಾತಾಡಬಾರದಿತ್ತು. ಅವರಿಗೆ ಆ ದುರ್ಬುದ್ದಿ ಹೇಗೆ ಬಂತೋ ಗೊತ್ತಿಲ್ಲ ಎಂದು ಸವದಿ ಹೇಳಿದರು.