– ಆಪ್ತ ಸಹಾಯಕನ ಬಂಧನಕ್ಕೆ ದೆಹಲಿ ಸಿಎಂ ಅಸಮಾಧಾನ
ನವದೆಹಲಿ: ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ (Swati Maliwal) ಅವರ ಮೇಲೆ ಹಲ್ಲೆ ಪ್ರಕರಣದಲ್ಲಿ ತಮ್ಮ ಆಪ್ತ ಸಹಾಯಕನನ್ನು ಬಂಧಿಸಿದ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ (BJP) ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರು ಆಪ್ ಪಕ್ಷದ ಹಿಂದೆ ಬಿದ್ದಿದ್ದಾರೆ. ಒಬ್ಬರಾದ ಬಳಿಕ ಒಬ್ಬರಂತೆ ನಮ್ಮ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ಮನೀಶ್ ಸಿಸೋಡಿಯ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ಮತ್ತು ನನ್ನನ್ನು ಜೈಲಿಗೆ ಹಾಕಲಾಯಿತು. ಈಗ ನನ್ನ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸ್ವಾತಿ ಮಲಿವಾಲ್ ಮೇಲೆ ದೌರ್ಜನ್ಯ – ಕೇಜ್ರಿವಾಲ್ ಆಪ್ತ ಸಹಾಯಕ ಅರೆಸ್ಟ್
ಈಗಷ್ಟೇ ಲಂಡನ್‌ನಿಂದ ವಾಪಸ್ ಆಗಿರುವ ರಾಘವ್ ಚಡ್ಡಾ ಅವರನ್ನು ಬಂಧಿಸಲಿದ್ದಾರಂತೆ. ಸೌರಭ್ ಭಾರಧ್ವಾಜ್ ಮತ್ತು ಅತಿಯನ್ನು ಜೈಲಿಗೆ ಹಾಕಲಾಗುವುದು ಎನ್ನಲಾಗುತ್ತಿದೆ. ನಮ್ಮನ್ನು ಜೈಲಿಗೆ ಹಾಕಲಾಗುತ್ತಿದೆ. ಅಷ್ಟಕ್ಕೂ ನಮ್ಮ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಬಡ ಜನರಿಗೆ ಒಳ್ಳೆಯ ಶಿಕ್ಷಣ, ಉತ್ತಮ ಆರೋಗ್ಯ ನೀಡುತ್ತಿರುವುದು ನಮ್ಮ ತಪ್ಪಾ? ಇದನ್ನು ಅವರು ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಜೈಲಿ ಕಾ ಕೇಲ್ (ಜೈಲಿನ ಆಟ) ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್
ನಾಳೆ ಮಧ್ಯಾಹ್ನ 12 ಗಂಟೆಗೆ ಎಲ್ಲ ಹಿರಿಯ ನಾಯಕರೊಂದಿಗೆ ನಾನು ಬಿಜೆಪಿ ಕಚೇರಿಗೆ ಬರಲಿದ್ದೇವೆ. ಯಾರ‍್ಯಾರನ್ನು ಜೈಲಿಗೆ ಹಾಕಬೇಕು ಒಟ್ಟಿಗೆ ಹಾಕಿ. ಹೀಗೆ ಜೈಲಿಗೆ ಹಾಕಿ ಆಪ್ ಪಕ್ಷವನ್ನು ನಾಶ ಮಾಡಬೇಕು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಆಪ್ ಪಕ್ಷ ಒಂದೇ ಚಿಂತನೆಯಾಗಿದೆ. ಇದನ್ನು ನಾಶ ಮಾಡಲು ಪ್ರಯತ್ನಿಸಿದಷ್ಟು ಈ ಚಿಂತನೆ ದೇಶದಲ್ಲಿ ಹೆಚ್ಚಲಿದೆ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.