ಹೈದರಾಬಾದ್: ತಿಮ್ಮಪ್ಪನ ಚಿನ್ನಾಭರಣಗಳು ನಾಪತ್ತೆಯಾಗುತ್ತಿವೆ ಎಂದು ತಿರುಮಲ ತಿರುಪತಿ ದೇವಾಸ್ಥಾನ ಮಾಜಿ ಪ್ರಧಾನ ಅರ್ಚಕರಾದ ರಮಣ ದೀಕ್ಷಿತುಲು ಆರೋಪ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಟಿಡಿ ಕಮಿಟಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಧಾರ್ಮಿಕ ನಿಯಮಗಳ ಪ್ರಕಾರ ತಿಮ್ಮಪ್ಪನ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶವಿದ್ದರೆ ಅವುಗಳನ್ನು ಪ್ರದರ್ಶಿಸಲು ಸಿದ್ಧ. ಒಂದು ವೇಳೆ ದೇವರ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶ ಇಲ್ಲ ಅಂತಾದ್ರೆ ಅವುಗಳನ್ನು ಅಧುನಿಕ ತಂತ್ರಜ್ಞಾನ ಬಳಸಿ 3ಡಿ ಮಾದರಿಯಲ್ಲಿ ಮುದ್ರಣ ಮಾಡಿ ವಸ್ತುಸಂಗ್ರಾಹಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡುವುದಾಗಿ ಹೇಳಿದ್ದು, ಈ ಕುರಿತು ನಿರ್ಣಯವನ್ನು ಮೇಲಾಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಏನಿದು ಆರೋಪ: ದೇವರ ಆಭರಣಗಳಲ್ಲಿದ್ದ ವಜ್ರಾಭರಣ ನಾಪತ್ತೆಯಾಗಿದೆ ಎಂದು ಕೆಲ ದಿನಗಳ ಹಿಂದೆ ದೇವಾಲಯದ ಮಾಜಿ ಪ್ರಧಾನ ಅರ್ಚಕರು ಆರೋಪಿಸಿದ್ದರು. ಅಲ್ಲದೇ ದೇವಾಲಯದ ಸಮಿತಿ ಹಲವು ಆಕ್ರಮಗಳನ್ನು ನಡೆಸುತ್ತಿದ್ದು, ಈ ಕುರಿತು ತನಿಖೆ ಆಗಬೇಕು ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಬೆನ್ನಲ್ಲೇ ಟಿಟಿಡಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ದೇವಾಲಯದ ಕುರಿತು ಈ ರೀತಿ ಹೇಳಿಕೆ ನೀಡುವುದರ ವಿರುದ್ಧ ಕ್ರಮಕೈಗೊಳ್ಳುವ ದೃಷ್ಟಿಯಿಂದ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಈ ಹಿಂದೆ ತೆಗೆದುಕೊಂಡ ನಿರ್ಧಾರದ ಪ್ರಕಾರ ತಿರುಮಲ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಅರ್ಚಕರ ವಯಸ್ಸು 65 ವರ್ಷ ಪೂರ್ಣಗೊಂಡಿದ್ದರೆ ಸೇವೆಯಿಂದ ನಿವೃತ್ತಿ ಆಗಬೇಕಿದೆ. ಈ ನಿಯಮಗಳ ಆನ್ವಯ ಈಗಾಗಲೇ ರಮಣ ದೀಕ್ಷಿತುಲು ಅವರು ನಿವೃತ್ತಿಯಾಗಿದ್ದಾರೆ.
ಅರ್ಚಕರ ನಿವೃತ್ತಿ: ಟಿಟಿಡಿ ಆಡಳಿತ ಮಂಡಳಿಯ ಸಭೆಯಲ್ಲಿ 2012 ರಲ್ಲಿ ಜಾರಿಯಾಗಿದ್ದ ನಿಯಮಗಳ ಅನ್ವಯ 65 ವರ್ಷ ಮೀರಿದ ಅರ್ಚಕರು ಸೇವೆಯಿಂದ ತಕ್ಷಣವೇ ನಿವೃತ್ತಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರಮಣ ದೀಕ್ಷಿತುಲು ಆಗಮ ಶಾಸ್ತ್ರಗಳಿಗೆ ಟಿಟಿಡಿ ಅಸಡ್ಡೆ ತೋರುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಂಡಳಿ ನಿರ್ಣಯ ರದ್ದು ಮಾಡುವಂತೆ ನ್ಯಾಯಾಲಯದ ಮೇರೆ ಹೋಗುವುದಾಗಿ ತಿಳಿಸಿದ್ದಾರೆ.