ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಕಾಕ್ರೋಚ್ ಜನತಾ ಪಾರ್ಟಿ (CJP) ನಡುವೆ ಇಂದು (ಶನಿವಾರ) 3ನೇ ಸುತ್ತಿನ ಮಾತುಕತೆ ನಡೆಯಲಿದೆ.
ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಸಭೆ ನಡೆಯಲಿದೆ. ಹಲವು ದಿನಗಳ ಚರ್ಚೆ ಮತ್ತು ಸಂಧಾನದ ಬಳಿಕ ಈ ಸಭೆ ನಿರ್ಣಾಯಕ ಹಂತ ತಲುಪಿದ್ದು, ಕೇಂದ್ರ ಸರ್ಕಾರದ ಮುಂದಿನ ನಿಲುವಿನ ಮೇಲೆ ಎಲ್ಲರ ಗಮನ ನೆಟ್ಟಿದೆ.
ಈ ಸಭೆ ವಿಶೇಷ ಮಹತ್ವ ಪಡೆದುಕೊಂಡಿರುವುದಕ್ಕೆ ಕಾರಣ, ಸಿಜೆಪಿ ಮುಂದಿಟ್ಟಿದ್ದ ಮೂರು ಪ್ರಮುಖ ಬೇಡಿಕೆಗಳಲ್ಲಿ ಎರಡನ್ನ ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಕೊಂಡಿದ್ದು, ಉಳಿದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತ ಬೇಡಿಕೆಗೆ ಮಾತ್ರ ಹೆಚ್ಚುವರಿ ಸಮಯ ಕೋರಿರುವುದಾಗಿದೆ.

ಪ್ರಧಾನ್ ರಾಜೀನಾಮೆ ಕುರಿತು ಇಂದು ಉತ್ತರ?
ಶುಕ್ರವಾರ ನಡೆದ 2ನೇ ಸುತ್ತಿನ ಸಭೆಯ ಬಳಿಕ ಸಿಜೆಪಿ ನಾಯಕ ಅಶುತೋಷ್ ರಂಕಾ ಮಾತನಾಡಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶನಿವಾರ ಮಧ್ಯಾಹ್ನದೊಳಗೆ ತನ್ನ ನಿರ್ಧಾರ ತಿಳಿಸುವುದಾಗಿ ಹೇಳಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಕೂಡ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಸರ್ಕಾರದ ಅಂತಿಮ ನಿಲುವನ್ನು ಬಳಿಕ ಅಧಿಕೃತವಾಗಿ ತಿಳಿಸಲಾಗುವುದು ಎಂದು ದೃಢಪಡಿಸಿದ್ದಾರೆ.
ಯಾವ 2 ಬೇಡಿಕೆಗಳಿಗೆ ಕೇಂದ್ರ ಒಪ್ಪಿಗೆ?
ಶುಕ್ರವಾರದ ಸಭೆಯಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವಿನಲ್ಲಿ ಕೆಲಮಟ್ಟಿಗೆ ಸಡಿಲಿಕೆ ತೋರಿದ್ದು, ಸಿಜೆಪಿ ಮುಂದಿಟ್ಟಿದ್ದ 2 ಪ್ರಮುಖ ಬೇಡಿಕೆಗಳನ್ನು ಒಪ್ಪಿಕೊಂಡಿದೆ.
* ಜುಲೈ 20ರಂದು ನಡೆದ ‘ಚಲೋ ಸಂಸತ್’ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಬಾರದು. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಲು ಒಪ್ಪಿಕೊಂಡಿದೆ.
* ಇದಲ್ಲದೆ, ಸಚಿವರ ನಿವಾಸದ ಬದಲು ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಮಾತುಕತೆ ನಡೆಸುವ ಸಿಜೆಪಿ ಬೇಡಿಕೆಯನ್ನು ಸಹ ಸರ್ಕಾರ ಅಂಗೀಕರಿಸಿದೆ.

ಬದಲಾಗದ ಸಿಜೆಪಿ ನಿಲುವು
ಆದರೆ, ಈ ಎಲ್ಲ ಬೆಳವಣಿಗೆಗಳ ನಡುವೆಯೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಷಯದಲ್ಲಿ ಸಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಶಿಕ್ಷಣ ಸಚಿವರ ರಾಜೀನಾಮೆ ತಮ್ಮ ಅನಿವಾರ್ಯ ಬೇಡಿಕೆ ಎಂದು ಪಕ್ಷ ಪುನರುಚ್ಚರಿಸಿದೆ. ಇದರ ಜೊತೆಗೆ, ಪ್ರತಿಭಟನಾಕಾರರ ವಿರುದ್ಧ ನಡೆದಿತ್ತೆಂದು ಆರೋಪಿಸಲಾಗಿರುವ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂಬ ಬೇಡಿಕೆಯನ್ನು ಸಹ ಸಿಜೆಪಿ ಮುಂದಿಟ್ಟಿದೆ.
ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಮೂರನೇ ಸುತ್ತಿನ ಮಾತುಕತೆ ಬಳಿಕ ಕೇಂದ್ರ ಸರ್ಕಾರ ಯಾವ ನಿರ್ಧಾರ ಪ್ರಕಟಿಸುತ್ತದೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
