ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ಕಾಡು – ನಾಡು ಎನ್ನದೇ ಕಾಡಾನೆಗಳು ದಾಂಧಲೆ ನಡೆಸುತ್ತಿವೆ. ಇಂದು ಗ್ರಾಮದೊಳಕ್ಕೆ ಎಂಟ್ರಿಕೊಟ್ಟಿರೋ ಕಾಡಾನೆ, ಮನೆಗಳ ಹತ್ತಿರವೇ ಬಂದು ಜನರಲ್ಲಿ ಆತಂಕ ಹುಟ್ಟಿಸಿದೆ. ಗಜಪಡೆಗಳ ನಿರಂತರ ಗಲಾಟೆಯಿಂದ ರೈತರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಒಮ್ಮೆಯೂ ತಲೆಹಾಕದ ಅರಣ್ಯ ಸಚಿವ ಉಮೇಶ್ ಕತ್ತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.
ಹೌದು, ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಸದ್ಯಕ್ಕೆ ನಿಲ್ಲುವಂತೆ ಕಾಣ್ತಿಲ್ಲ. ಇಂದೂ ಕೂಡಾ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮಕ್ಕೆ ಕಾಡಾನೆ ಎಂಟ್ರಿಕೊಟ್ಟಿದೆ. ಗ್ರಾಮದೊಳಗೇ ಹಾದುಹೋಗೋ ಕಾಡಾನೆ ಡ್ರಂನಲ್ಲಿರುವ ನೀರು ಕುಡಿದು ಸಾಗುತ್ತೆ. ಅಲ್ಲದೇ ದಾರಿಯಲ್ಲಿ ಸಿಗೋ ಅಕ್ಕಪಕ್ಕದ ಮನೆಗಳ ಬಳಿಯೂ ಹೋಗುತ್ತದೆ. ಇದ್ರಿಂದ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದಾರೆ. ಹಗಲು ರಾತ್ರಿ ಎನ್ನದೇ, ಕಾಡು – ನಾಡು ಎನ್ನದೇ ಕಾಡಾನೆಗಳು ಓಡಾಟ ನಡೆಸುತ್ತಿವೆ. ನಾವು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿರೋದ್ರ ಜೊತೆಗೆ ಮನೆಗಳ ಬಳಿಯೂ ಬಂದು ವಸ್ತುಗಳನ್ನು ನಾಶ ಪಡಿಸುತ್ತಿವೆ ಅಂತಾ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.
ಕಾಡಾನೆಗಳ ಓಡಾಟ ಕೇವಲ ಒಂದೆರೆಡು ದಿನಕ್ಕೆ ಸೀಮಿತವಾಗಿಲ್ಲ. ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಒಂದಲ್ಲ ಒಂದು ಕಡೆ ನಿತ್ಯವೂ ಸಂಚಾರ ಮಾಡುತ್ತಿವೆ. ಗ್ರಾಮಗಳ ಜನರ ಜೊತೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರೋ ಸಿಬ್ಬಂದಿ ತಮ್ಮ ಪ್ರಾಣದ ಹಂಗನ್ನೂ ತೊರೆದು ನಿತ್ಯವೂ ಕಾಡಾನೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡ್ತಿದ್ದಾರೆ. ಇವರೂ ಕೂಡಾ ನಿತ್ಯ ಆತಂಕದಲ್ಲಿ ಕೆಲಸ ಮಾಡೋ ಸನ್ನಿವೇಶ ನಿರ್ಮಾಣವಾಗಿದೆ. ಇನ್ನು ಸಚಿವ ಉಮೇಶ್ ಕತ್ತಿ ಅರಣ್ಯ ಸಚಿವರಾದಾಗಿನಿಂದಲೂ ಒಮ್ಮೆಯೂ ಇತ್ತ ತಲೆ ಹಾಕದಿರೋದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ಇದನ್ನೂ ಓದಿ: ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್
ಒಟ್ಟಿನಲ್ಲಿ ಮಲೆನಾಡು ಭಾಗದಲ್ಲಿ ಜನರು, ಕಾಡು ಪ್ರಾಣಿಗಳೊಂದಿಗೆ ಹೋರಾಡಿ ಬದುಕೋ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕಾಡಾನೆಗಳ ಸ್ಥಳಾಂತರ ಹಾಗೂ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸೋದ್ರಿಂದ ಯಾವುದೇ ಪ್ರಯೋಜನವಾಗೋದಿಲ್ಲ. ಅವುಗಳಿಂದ ಶಾಶ್ವತ ಪರಿಹಾರ ಕೊಟ್ಟರೆ ಮಾತ್ರ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ಇಲ್ಲವಾದ್ರೆ ಹೀಗೆ ಕಾಡುಪ್ರಾಣಿಗಳ ಹಾಗೂ ಮಾನವರ ಸಂಘರ್ಷ ಮುಂದುವರಿಯುತ್ತದೆ.