ಬಳ್ಳಾರಿ: ಮದುವೆಯಾದ ಆರು ತಿಂಗಳಿಗೆ ವರದಕ್ಷಿಣೆ ಹಣದ ಆಸೆಗಾಗಿ ಗೃಹಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ದಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಪ್ಪಿಹಾಳ ತಾಂಡದಲ್ಲಿ ಈ ಘಟನೆ ನಡೆದಿದೆ. ಸದ್ಯ ತೀವ್ರ ಸುಟ್ಟ ಗಾಯಳಿಂದ ಬಳಲುತ್ತಿರುವ ಗೃಹಿಣಿಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆನೇಕಲ್ ತಂಡದ ಸಂಗೀತಾ ಎಂಬ ಯುವತಿಯನ್ನು, ಮರಬ್ಬಿಪಾಳ್ ತಾಂಡದ ಪ್ರಕಾಶ್ ಎಂಬವರಿಗೆ ಕಳೆದ ಆರು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಐವತ್ತು ಸಾವಿರ ನಗದು, ಮೂರು ತೊಲೆ ಬಂಗಾರ ಮತ್ತು ಬೈಕ್ ಅನ್ನು ನೀಡಲಾಗಿತ್ತು. ಆದ್ರೆ, ಮದುವೆಯಾದ ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟ ವರನ ಕುಟುಂಬಸ್ಥರು ಸಂಗೀತಾರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ.
ಈ ಕುರಿತು ಪೋಷಕರ ಬಳಿ ಸಂಗೀತಾ ಹೇಳಿಕೊಂಡಿದ್ದು, ಪೋಷಕರಿಂದ ಸಮಾಧಾನಕರ ಉತ್ತರ ಪಡೆದು ಸುಮ್ಮನಾಗಿದ್ದಾಳೆ. ಆದರೆ ಆರೋಪಿಯು ನಿನ್ನೆ ಸಂಗೀತಾಳನ್ನು ಸೀಮೆ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಪರಿಣಾಮ ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದು, ಸಂಗೀತಾ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.
ಘಟನೆಯ ಬಳಿಕ ಆರೋಪಿ ಪ್ರಕಾಶ್ ಕುಟುಂಬ ನಾಪತ್ತೆಯಾಗಿದೆ. ಘಟನೆ ಕುರಿತು ಹಗರಿಬೊಮ್ಮನ ಹಳ್ಳಿ ತಾಂಡದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.