ಬೆಳಗಾವಿ: ವಿಡಿಯೋ ಕಾಲ್ ಮಾಡಿ ಗಂಡನ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಪಾಪಿ ಪತ್ನಿಯನ್ನು ಖಾನಾಪುರ ಪೊಲೀಸರು(Khanapura Police) ಬಂಧಿಸಿದ್ದಾರೆ.
ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ಬಲೋಗಿ ನಿವಾಸಿ ಶಿವನಗೌಡ ಪಾಟೀಲ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಕೊಲೆಯಾದ ಶಿವನಗೌಡ ಅವರ ಪತ್ನಿ ಶೈಲಾ ಪಾಟೀಲ್‌ಗೆ ಹಾಗೂ ಕೊಲೆ ಆರೋಪಿ ರುದ್ರಪ್ಪ ಹೊಸಟ್ಟಿ ಜೊತೆಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಇದನ್ನೂ ಓದಿ: ಪ್ರಸಿದ್ಧ ವಿದೇಶಿ ವೈದ್ಯರಂತೆ ನಟಿಸಿ ಹಾರ್ಟ್ ಆಪರೇಷನ್ – ನಕಲಿ ವೈದ್ಯನ ಹುಚ್ಚಾಟಕ್ಕೆ 7 ಜನ ಬಲಿ
ರುದ್ರಪ್ಪ ಮತ್ತು ಶೈಲಾ ನಡುವಿನ ಈ ಸಂಬಂಧದ ಬಗ್ಗೆ ಪತಿ ಶಿವನಗೌಡನಿಗೆ ಗೊತ್ತಾಗಿತ್ತು. ಇದೇ ಕಾರಣಕ್ಕೆ ಆತನ ಸಹವಾಸ ಬಿಡು ಎಂದು ಶಿವನಗೌಡ ತನ್ನ ಪತ್ನಿಗೆ ಬುದ್ಧಿ ಹೇಳಿದ್ದರು.
ಶಿವನಗೌಡ ಅವರು ಪತ್ನಿಯನ್ನು ತವರು ಮನೆಗೆ ಬಿಟ್ಟು ವಾಪಾಸ್ ಆಗುತ್ತಿದ್ದಾಗ, ರುದ್ರಪ್ಪ ಎಣ್ಣೆ ಪಾರ್ಟಿ ಮಾಡಿಸಿ ಶಿವನಗೌಡರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಇದನ್ನು ಪತ್ನಿ ಶೈಲಾ ವಿಡಿಯೋ ಕಾಲ್ ಮೂಲಕ ವೀಕ್ಷಣೆ ಮಾಡಿದ್ದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಸುತ್ತಿಗೆಯಿಂದ ಇಂಜಿನಿಯರ್ ತಲೆ ಒಡೆದು ಹತ್ಯೆಗೈದ ಪತಿ
ಗಂಡ ತೀರಿ ಹೋದಾಗ ಆತನ ಪಾರ್ಥಿವ ಶರೀರದ ಮುಂದೆ ಕುಳಿತು ಹಾಡಾಡಿ ಅತ್ತ ಪತ್ನಿಯ ಕಾಲ್ ಹಿಸ್ಟರಿಯಲ್ಲಿ ಆಕೆಯ ಕರಾಳ ಸಂಬಂಧದ ಕುರುಹುಗಳು ಪತ್ತೆಯಾಗಿವೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಯ ಆರೋಪಿಗಳಾದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.