ರಾಮನಗರ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ರಾಮನಗರದ ಗೌಸಿಯಾನಗರದಲ್ಲಿ ನಡೆದಿದೆ. ಈ ಪ್ರಕರಣವನ್ನು ರಾಮನಗರ ಟೌನ್ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಮನಗರದ ಗೌಸಿಯಾನಗರದ ನಿವಾಸಿ ಸಾಧಿಕ್ ಪಾಷ (32) ಮೃತ ಪತಿಯಾಗಿದ್ದು, ಕೊಲೆ ಮಾಡಿದ ಆರೋಪಿಗಳಾದ ಪ್ರಿಯಕರ ಮಹಮ್ಮದ್ ರಂಜಾನ್ ರೇಷ್ಮೆ (20), ಪತ್ನಿ ಅಸ್ಮಾ ಬಾನು(27) ಬಂಧಿತರು.
ಮೃತ ಸಾಧಿಕ್ ಪಾಷಾ ಸೇರಿದಂತೆ ಆತನ ಪತ್ನಿ, ಆಕೆಯ ಪ್ರಿಯಕರ ಮಹಮ್ಮದ್ ಪಿಲೇಚಾರಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಆಸ್ಮಾ ಬಾನು ಹಾಗು ಮಹಮ್ಮದ್ ನಡುವೆ ಪ್ರೇಮಾಂಕುರವಾಗಿದೆ. ಪತಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿದ್ದು, ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಸಾಧಿಕ್ ಪಾಷನನ್ನ ಮುಗಿಸಲು ಇಬ್ಬರು ಸಂಚು ರೂಪಿಸಿದ್ದರು.
ಆಸ್ಮಾ ಭಾನು ತನ್ನ ಪ್ರಿಯಕರನೊಂದಿಗೆ ಸೇರಿ ಭಾನುವಾರ ಮನೆಯಲ್ಲಿದ್ದ ಸಾಧಿಕ್ ಪಾಷಾನನ್ನು ಹತ್ಯೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸಾದಿಕ್ ಪಾಷಾ ಹಾಗೂ ಮಹಮ್ಮದ್ ನಡುವೆ ಗಲಾಟೆಯಾಗಿದ್ದು, ಇಬ್ಬರು ಕೂಡ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಇದೇ ವೇಳೆ ಅಸ್ಮಾ ಭಾನು ಲಟ್ಟಣಿಗೆಯಿಂದ ಪತಿಯ ತಲೆ ಮೇಲೆ ಹೊಡೆದಿದ್ದು, ನೆಲಕ್ಕೆ ಬಿದ್ದ ಸಾಧಿಕ್ ಪಾಷಾನ ಮುಖದ ಮೇಲೆ ತಲೆದಿಂಬಿಟ್ಟು ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.
ಆಸ್ಮಾ ಭಾನು ಕೃತ್ಯಕ್ಕೆ ಸಹಕಾರ ನೀಡಿದ ಪ್ರಿಯಕರ ಮಹಮ್ಮದ್ ಕೂಡ ಸಾದಿಕ್ ಎದೆಗೆ ಬಲವಾಗಿ ಒದ್ದು, ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿದ್ದಾನೆ. ಬಳಿಕ ತಮಗೇನು ತಿಳಿದಿಲ್ಲ ಎಂಬಂತೆ ನಾಟಕವಾಡಿದ ಅಸ್ಮಾ ಭಾನು, ಪತಿ ಏಕಾಏಕಿ ಮೃತ ಪಟ್ಟಿದ್ದಾನೆ ಎಂದು ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಘಟನೆ ಸಂಬಂಧ ಪರಿಶೀಲನೆಗೆ ತೆರೆಳಿದ್ದ ಪೊಲೀಸರು, ಮೃತನ ಮೈಮೇಲಿದ್ದ ಗಾಯದ ಗುರುತುಗಳನ್ನು ಕಂಡು ಅನುಮಾನಗೊಂಡಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.
ರಾಮನಗರ ಟೌನ್ ಪೊಲೀಸರು ಪ್ರಕರಣದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಹಮ್ಮದ್ ಪಶ್ಚಿಮ ಬಂಗಾಳದವನಾಗಿದ್ದು, ಆಸ್ಮಾ ಭಾನು ಮುಂಬೈ ಮೂಲದವಳು. ಕೊಲೆ ಮಾಡಿದ ಬಳಿಕ ಮಹಮ್ಮದ್ ಪರಾರಿಯಾಗಲು ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.