ಹಾಸನ: ಪತ್ನಿಯನ್ನು ಕೊಲೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ್ದ ಪತಿರಾಯನೊಬ್ಬ ತನ್ನ ಮಾಂಸದ ತುಣುಕಿನಿಂದಾಗಿ ಕೊನೆಗೂ ಜೈಲು ಸೇರಿದ್ದಾನೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೊಂಗಡಹಳ್ಳದ ನಿವಾಸಿ ಸುರೇಶ್ ಶಿಕ್ಷೆಗೆ ಗುರಿಯಾಗಿರೋ ಅಪರಾಧಿ. ಹಾಸನದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುರೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಪ್ರಕಟಿಸಿದೆ.
Advertisement
Advertisement
ಏನಿದು ಪ್ರಕರಣ?
ಮದುವೆಯಾಗಿ 20 ವರ್ಷ ಕಳೆದು ಪಿಯುಸಿ ಓದುತ್ತಿದ್ದ ಮಗ ಇದ್ದರೂ, ಸುರೇಶ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರವಾಗಿ ಸುರೇಶ್ ಮತ್ತು ಪತ್ನಿ ಗೀತಾ ನಡುವೆ ಅನೇಕ ಸಲ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ಹೋಗಿ, 2015ರ ಮಾರ್ಚ್ 8 ರಂದು ಮನೆಯಲ್ಲಿಯೇ ಪತ್ನಿ ಗೀತಾಳನ್ನು ಸುರೇಶ್ ಕೊಲೆ ಮಾಡಿದ್ದ.
Advertisement
ಸಾಕ್ಷ್ಯ ನಾಶಪಡಿಸಿ ತಾನು ಬಚಾವಾಗಲು, ಗೀತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಾನೇ ಅಂಬುಲೆನ್ಸ್ ನಲ್ಲಿ ಮೃತದೇಹವನ್ನು ಪತ್ನಿಯ ತವರು ಮನೆಗೆ ಕೊಂಡೊಯ್ದಿದ್ದ. ಆದರೆ ಸುರೇಶ್ ಮುಖ ಹಾಗೂ ಮೃತ ಗೀತಾಳ ಮೈಮೇಲೆ ಗಾಯಗಳಾಗಿದ್ದರಿಂದ ಅನುಮಾನಗೊಂಡ ಗೀತಾ ತಂದೆ ಗೋವಿಂದೇಗೌಡ, ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರರಣ ದಾಖಲಿಸಿಕೊಂಡು ಪೋಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಹ ಸಲ್ಲಿಸಿದ್ದರು.
Advertisement
ಡಿಎನ್‍ಎ ಪರೀಕ್ಷೆ:
ವಿಚಾರಣೆ ವೇಳೆ ಗೀತಾ ಪೋಷಕರು ಹಾಗೂ ಸಂಬಂಧಿಕರು ಪ್ರತಿಕೂಲ ಸಾಕ್ಷಿ ನುಡಿದಿದ್ದರಿಂದ ಇಡೀ ಪ್ರಕರಣ ಬಿದ್ದು ಹೋಗುವ ಹಂತಕ್ಕೆ ಬಂದಿತ್ತು. ಮರಣೋತ್ತರ ಪರೀಕ್ಷೆ ವೇಳೆ ಗೀತಾ ಉಗುರಲ್ಲಿದ್ದ ಸಣ್ಣ ಮಾಂಸದ ತುಣುಕನ್ನು ವೈದ್ಯರು ಸಂಗ್ರಹ ಮಾಡಿದ್ದರಿಂದ ಅದನ್ನೇ ಡಿಎನ್‍ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಆರೋಪಿಯ ರಕ್ತವನ್ನೂ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅಂತಿಮವಾಗಿ ಉಗುರಿನಲ್ಲಿದ್ದ ಸಣ್ಣ ಚರ್ಮದ ಕಲೆ ಸುರೇಶನದ್ದೇ ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ಶಿಕ್ಷೆಯನ್ನು ಪ್ರಕಟಿಸಿತು. ನನ್ನ ವಿರುದ್ಧ ಸಾಕ್ಷ್ಯವೇ ಇಲ್ಲ ಎಂದು ಖುಲಾಸೆ ಕನಸು ಕಾಣುತ್ತಿದ್ದ ಕೊಲೆಗಡುಕನನ್ನು ಆತನದೇ ಸಣ್ಣ ಮಾಂಸದ ತುಣುಕು ಬದುಕಿರುವವರೆಗೂ ಜೈಲಿನಲ್ಲಿ ಕೊಳೆಯುವಂತೆ ಮಾಡಿರುವುದು ವಿಶೇಷ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv