ಚಿಕ್ಕಬಳ್ಳಾಪುರ: ಗಂಡನ ಹತ್ಯೆಗೆ 40 ಲಕ್ಷ ರೂ.ಗೆ ಸುಪಾರಿ ಕೊಟ್ಟ ಐನಾತಿ ಹೆಂಡತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಟಿ ದಾಸರಹಳ್ಳಿಯ ನಿವಾಸಿ ಮಮತಾ ತನ್ನ ಗಂಡ ಮುಕುಂದನ ಕೊಲೆಗೆ 40 ಲಕ್ಷ ರೂ.ಗೆ ಸುಪಾರಿ ನೀಡಿದ್ದಳು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮಮತಾ, ಮಮತಾಳ ಸ್ನೇಹಿತೆ ತಸ್ಲೀಮಾ, ಹಾಗೂ ಸುಪಾರಿ ಹಂತಕರಾದ ಮೌಲಾ, ಸಯ್ಯದ್ ನಯೀಮ್‍ರನ್ನು ಬಂಧಿಸಿದ್ದಾರೆ.
Advertisement
Advertisement
ಘಟನೆಯೇನು?: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಬೆಂಗಳೂರಿನ ಟಿ. ದಾಸರಹಳ್ಳಿಯ ಮುಕುಂದ ಎಫ್‍ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ಬೆಂಗಳೂರಿನಿಂದ ತಮ್ಮ ಸ್ಯಾಂಟ್ರೋ ಕಾರಿನಲ್ಲಿ ತಮ್ಮ ನಾಲ್ವರು ಸಹ ಉದ್ಯೋಗಿಗಳೊಂದಿಗೆ ಬೆಂಗಳೂರಿನಿಂದ ಕಚೇರಿಗೆ ಬಂದು ಹೋಗುತ್ತಿದ್ದರು.
Advertisement
ಅದೇ ರೀತಿ ಮೇ 26ರಂದು ಕೆಲಸ ಮುಗಿಸಿ ಸ್ಯಾಂಟ್ರೋ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ದೊಡ್ಡಬಳ್ಳಾಪುರ ನಗರದ ಕೈಗಾರಿಕೆ ಪ್ರದೇಶದಲ್ಲಿ ಸ್ಯಾಂಟ್ರೋ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು ಗಾಜು ಒಡೆದು ಮುಕುಂದ ಕೊಲೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಕಾರು ಡೋರ್ ಲಾಕ್ ಆಗಿದ್ದು, ಸಾರ್ವಜನಿಕರು ಬಂದ ಕಾರಣ ಹಂತಕರ ಪ್ಲ್ಯಾನ್ ಫ್ಲಾಪ್ ಆಗಿ ವಾಪಸ್ಸಾಗಿದ್ದರು. ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಕೊಲೆಗೆ ಯತ್ನಿಸಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Advertisement
ಪೊಲೀಸರಿಂದ ಸುಪಾರಿ ಹತ್ಯೆ ಬಯಲು:
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಘಟನೆ ನಡೆದ ಸುತ್ತ ಮುತ್ತಲೂ ಏರಿಯಾಗಳಲ್ಲಿನ ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಬಿಳಿ ಬಣ್ಣದ ಕಾರಿನ ಮೇಲೆ ಅನುಮಾನ ಬಂದಿತ್ತು. ಅನುಮಾನದ ಮೇರೆಗೆ ಕಾರು ನಂಬರ್ ಆಧರಿಸಿ ಕಾರು ಪತ್ತೆ ಹಂಚಲು ಮುಂದಾದಾಗ ಆ ಕಾರು ಒಬ್ಬರಲ್ಲ, 7 ಮಂದಿ ಮಾಲೀಕರ ಬದಲಾವಣೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಕಾರನ್ನ ಕೊನೆಗೆ ಗ್ಯಾರೇಜ್ ಒಂದರಲ್ಲಿ ಪತ್ತೆ ಹಚ್ಚಿದ್ದರು. ಪತ್ತೆ ಹಚ್ಚಿ ಆರೋಪಿ ಮೌಲ ಹಾಗೂ ನಯೀಮ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಮತಾಳ ಸುಪಾರಿ ಕಥೆ ಬಯಲಾಗಿದೆ. ಮುಕುಂದನ ಹತ್ಯೆಗೆ ಹೆಂಡತಿ ಮಮತಾ ಸ್ನೇಹಿತೆ ತಸ್ಲೀಮಾ ಮೂಲಕ ಸುಪಾರಿ ಕೊಟ್ಟಿದ್ದಳು ಎನ್ನುವ ವಿಚಾರ ಬಹಿರಂಗವಾಗಿದೆ.
ಗಂಡನ ಮೇಲೆ ಹೆಂಡತಿ ಸುಪಾರಿ ಕೊಟ್ಟಿದ್ದು ಯಾಕೆ?:
ಮಮತಾ ತನ್ನ ಮನೆಯ ಪಕ್ಕದ ಮಹಿಳೆಯೊಬ್ಬರ ಬಳಿ ಸಂಬಂಧಿಕರಿಂದ ಚೀಟಿ ಹಾಕಿಸಿದ್ದಳು. ಆದರೆ ಚೀಟಿ ಹಣ ಪಡೆದ ಮಹಿಳೆ ಪಂಗನಾಮ ಹಾಕಿ ಮೋಸ ಮಾಡಿ ಪರಾರಿಯಾಗಿದ್ದಾಳೆ. ಇದರಿಂದ ಸಂಬಂಧಿಕರೆಲ್ಲಾ ಹಣ ಕೊಡುವಂತೆ ಮಮತಾಳ ದುಂಬಾಲು ಬಿದ್ದಿದ್ದರು.
ಇದ್ರಿಂದ ಗಂಡ 20 ಲಕ್ಷದಷ್ಟು ಸ್ವಂತ ಹಣ ಕೊಟ್ಟಿದ್ದು, ಆದರೂ ಮತ್ತಷ್ಟು ಮಂದಿ ಹಣ ಕೊಡಿ ಅಂತ ಮನೆಗೆ ಬರುತ್ತಿದ್ದರು. ಇದರಿಂದ ದಿನೇ ದಿನೇ ಇದೇ ಆಗೋಯ್ತು ಎಂದು ಹೆಂಡತಿ ಮಮತಾಳ ಮೇಲೆ ಗಂಡ ಕೋಪಗೊಂಡು ಬೈಯ್ಯುತ್ತಿದ್ದ. ಅಷ್ಟೇ ಅಲ್ಲದೇ ಮಮತಾಳ ತಂದೆ, ತಾಯಿಯನ್ನು ಕರೆಸಿ ಹೇಳಿ ಅವಮಾನ ಮಾಡಿದ್ದ.
ಈ ವಿಚಾರವನ್ನು ಮಮತಾ ತನ್ನ ಸ್ನೇಹಿತೆ ತಸ್ಲೀಮಾ ಬಳಿ ಹೇಳಿಕೊಂಡಿದ್ದಳು, ಈ ವೇಳೆ ತಸ್ಲೀಮಾ ಗಂಡನನ್ನು ಹತ್ಯೆ ಮಾಡುವ ಯೊಚನೆಯನ್ನು ನೀಡಿದ್ದಾಳೆ. ಗಂಡ ಮೃತಪಟ್ಟರೆ ಗಂಡನ ಆಸ್ತಿಯೆಲ್ಲಾ ನಿನ್ನ ಹೆಸರಿಗೆ ಬರುತ್ತೆ. ಸಾಲ ತೀರಿಸಿ ನೆಮ್ಮದಿಯಾಗಿರಬಹುದು ಎಂದು ಹೇಳಿದ್ದಾಳೆ. ಇದನ್ನೂ ಓದಿ: ಹಿಜಬ್ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ: ಯು.ಟಿ.ಖಾದರ್
ಆಗ ತಸ್ಲೀಮಾ ತನಗೆ ಪರಿಚಯ ಇದ್ದ ಮೌಲಾ ಹಾಗೂ ನಯೀಮ್‍ನನ್ನು ಕರೆಸಿ 40 ಲಕ್ಷ ರೂ.ಗೆ ಸುಪಾರಿ ಡೀಲ್ ಒಪ್ಪಿಸಿದ್ದಾಳೆ. ಆಗ ಮಮತಾ ತನ್ನ ಒಡವೆ ಮಾರಿ 10 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದು ಅದೇ ಅಡ್ವಾನ್ಸ್ ಹಣದಲ್ಲಿ 1 ಲಕ್ಷ ಕೊಟ್ಟು ಗೆಟ್ಜ್ ಕಾರು ಖರೀದಿಸಿ ಹತ್ಯೆಗೆ ಮುಂದಾಗಿದ್ದರು.
ಸದ್ಯ ಪೊಲೀಸರು ಪತ್ನಿ ಮಮತಾಳನ್ನು ಬಂಧಿಸಿದ್ದಾರೆ. ವಿಪರ್ಯಾಸ ಅಂದರೆ ಗಂಡನ ಹತ್ಯೆಗೆ ಸುಪಾರಿ ನೀಡಿದ್ದ ಮಮತಾ, ಘಟನೆ ನಡೆದ ದಿನ ಹಾಗೂ ಕಾರು ಬಿಡಿಸಿಕೊಳ್ಳುವಾಗ ಗಂಡನ ಜೊತೆಯಲ್ಲೇ ಪೊಲೀಸ್ ಠಾಣೆಗೆ ಬಂದು ಗೊತ್ತಿಲ್ಲದವಳಂತೆ ನಾಟಕ ಮಾಡಿದ್ದಳು.
ಆದರೆ ಪೊಲೀಸರು ತನಿಖೆ ನಡೆಸಿದಾಗ ನಿಜವಾದ ವಿಚಾರ ತಿಳಿದುಬಂದಿದ್ದು, ಪತ್ನಿ ಮಮತಾ, ಸ್ನೇಹಿತೆ ತಸ್ಲೀಮಾ, ಸುಪಾರಿ ಹಂತಕರಾದ ಶಿಡ್ಲಘಟ್ಟ ಮೂಲದ ಮೌಲಾ, ಕೆ ಜಿ ಹಳ್ಳಿಯ ನಯೀಮ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್
ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ 4 ಮಂದಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದೇವೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಕೋನ ವಂಶಿಕೃಷ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ನಾಗರಾಜ್, ಸಿಪಿಐ ಗಳಾದ ಸತೀಶ್ ಹಾಗೂ ಹರೀಶ್ ಭಾಗಿಯಾಗಿದ್ದು, ಪೊಲೀಸರಿಗೆ ಎಸ್ಪಿ ಕೋನವಂಶಿಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.