ಚಿಕ್ಕಬಳ್ಳಾಪುರ: ಪತಿಯೊಬ್ಬ ತನ್ನ ಮೊದಲ ಪತ್ನಿಗೆ ಗೊತ್ತಿಲ್ಲದೆ ಮತ್ತೊಂದು ಮದುವೆಯಾಗಿದ್ದು, ಈ ವಿಷಯ ತಿಳಿದ ಮೊದಲ ಹೆಂಡ್ತಿ ಆತನಿಗೆ ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮೆಹಬೂಬ್ ಕದ್ದು ಮುಚ್ಚಿ ಎರಡನೇ ಮದುವೆಯಾದ ಪತಿ. ಮೆಹಬೂಬ್ ಚಿಕ್ಕಬಳ್ಳಾಪುರ ನಗರದ ರೇಷ್ಮೆ ಗೂಡು ಮಾರುಕಟ್ಟೆ ಬಳಿಯ ನಿವಾಸಿಯಾಗಿದ್ದು, ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಜೀವ ಸಾಗಿಸುತ್ತಿದ್ದನು. 4 ವರ್ಷಗಳ ಹಿಂದೆ ಮೆಹಬೂಬ್ ದೊಡ್ಡಬಳ್ಳಾಪುರದ ಸಲ್ಮಾತಾಜ್ ಜೊತೆ ವಿವಾಹವಾಗಿದ್ದನು. ಇವರಿಬ್ಬರ ಸುಖಸಂಸಾರ ದಾಂಪತ್ಯ ಜೀವನಕ್ಕೆ ಸಾಕ್ಷಿ ಎಂಬಂತೆ ಮೂವರು ಹೆಣ್ಣು ಮಕ್ಕಳು ಕೂಡ ಇದ್ದಾರೆ.
ಮೂರನೇ ಮಗುವಾದ ನಂತರ ಸಲ್ಮಾತಾಜ್ ತವರು ಮನೆಗೆ ಹೋಗಿದ್ದೇ ತಡ ಇತ್ತ ಮಂಚೇನಹಳ್ಳಿ ಮೂಲದ ಫರೀದಾ ಎಂಬಾಕೆಯನ್ನು ಮೆಹಬೂಬ್ ಮದುವೆಯಾಗಿದ್ದು, ಈಗ ಆಕೆಗೂ ಒಂದು ಹೆಣ್ಣು ಮಗು ಇದೆ. ಒಂದು ವರ್ಷದಿಂದಲೂ ಅತ್ತ ತವರು ಮನೆಯಲ್ಲಿದ್ದ ಸಲ್ಮಾತಾಜ್ ಜೊತೆಯಲ್ಲೂ ಇತ್ತ ಎರಡನೇ ಪತ್ನಿ ಫರೀದಾ ಜೊತೆಯಲ್ಲೂ ಸಂಸಾರ ಮಾಡುತ್ತಾ ಮೆಹಬೂಬ್ ಡಬಲ್ ಆಕ್ಟಿಂಗ್ ಮಾಡಿದ್ದಾನೆ.
ಕಳೆದ ಒಂದು ವರ್ಷದಿಂದಲೂ ಕದ್ದುಮುಚ್ಚಿ ಎರಡು ಕಡೆ ಸಂಸಾರ ಸಾಗಿಸುತ್ತಿದ್ದ ಗಂಡನ ಡಬಲ್ ಆಕ್ಟಿಂಗ್ ಬಂಡವಾಳ ಇತ್ತೀಚೆಗೆ ಸಂಬಂಧಿಕರ ಮುಖಾಂತರ ಸಲ್ಮಾತಾಜ್‍ಗೆ ಗೊತ್ತಾಗಿದೆ. ಇದರಿಂದ ಕೆರಳಿದ ಸಲ್ಮಾತಾಜ್ ಮೊದಲು ಕರೆದು ಮೆಹಬೂಬ್‍ಗೆ ಬುದ್ಧಿವಾದ ಹೇಳಿದರೂ ಎರಡನೇ ಪತ್ನಿಯನ್ನು ಬಿಡಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಮಕ್ಕಳ ಸಮೇತ ಪತಿಯ ಮನೆ ಬಳಿ ಬಂದ ಸಲ್ಮಾತಾಜ್ ಆತನಿಗೆ ಮಹಾಮಂಗಳಾರತಿ ಮಾಡಿ ಆತನನ್ನು ಕರೆದುಕೊಂಡು ಹೋಗಿದ್ದಾಳೆ. ಆದರೆ ಇತ್ತ ನನ್ನ ಗಂಡ ನನಗೂ ಬೇಕು ಎಂದು ಎರಡನೇ ಪತ್ನಿ ಫರೀದಾ ಹೇಳುತ್ತಿದ್ದಾಳೆ.