-ಕೊನೆಗೆ ಪ್ರೀತ್ಸಿ ಮದ್ವೆಯಾಗಿದ್ದ ಗಂಡನನ್ನೇ ಕೊಲೈಗೈದ್ಳು
ಚಂಡೀಗಢ: ಪತಿಯನ್ನು ಕೊಂದ ಆರೋಪದ ಮೇರೆಗೆ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ಹರಿಯಾದ ಗುರುಗ್ರಾಮದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಅನಿತಾ ಮತ್ತು ರಾಜನ್ ಎಂದು ಗುರುತಿಸಲಾಗಿದೆ. ಆರೋಪಿ ಪತ್ನಿ ಅನಿತಾ ತನ್ನ ಪ್ರಿಯಕರ ರಾಜನ್ ಜೊತೆ ಸೇರಿಕೊಂಡು ಪತಿ ಅರವಿಂದ್‍ನನ್ನು ಬುಧವಾರ ಮುಂಜಾನೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಿತಾ ತನ್ನ ಪತಿಯನ್ನು ರಾಜನ್ ಸಹಾಯದಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ನಂತರ ಶನಿವಾರ ಆಕೆಯನ್ನು ಬಂಧಿಸಲಾಗಿದೆ. ಇನ್ನೂ ಗುರುಗ್ರಾಮದಲ್ಲಿರುವ ಅಡಗುತಾಣದಲ್ಲಿ ಆರೋಪಿ ರಾಜನ್‍ನನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬೊಕಾನ್ ಹೇಳಿದ್ದಾರೆ.
ನಾನು ಪತಿಗೆ ಬ್ರೇಕ್‍ಫಾಸ್ಟ್ ನೀಡಲು ಹೋದಾಗ ಪತಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಬುಧವಾರ ಬೆಳಗ್ಗೆ ಅನಿತಾ ಪೊಲೀಸರಿಗೆ ತಿಳಿಸಿದ್ದಳು. ಆದರೆ ತನಿಖೆಯ ಸಂದರ್ಭದಲ್ಲಿ ಮೃತ ಅರವಿಂದ್ ತಂದೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು.
ನನ್ನ ಮಗ ಅರವಿಂದ್ 10 ವರ್ಷಗಳ ಹಿಂದೆ ಬಿಹಾರದಲ್ಲಿ ಅನಿತಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ವಿವಾಹದ ನಂತರ ಇಬ್ಬರು ಗುರುಗ್ರಾಮದಲ್ಲಿ ವಾಸಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ನನ್ನ ಮಗನ ಸ್ನೇಹಿತ ರಾಜನ್‍ನನ್ನು ಭೇಟಿ ಮಾಡಿದ್ದನು. ಈ ವೇಳೆ ಮನೆಯ ಬಾಡಿಗೆಯನ್ನು ಅರ್ಧದಷ್ಟು ಹಂಚಿಕೊಳ್ಳುವ ಷರತ್ತಿನೊಂದಿಗೆ ರಾಜನ್ ಕೂಡ ಅವರೊಂದಿಗೆ ಇದ್ದನು. ದಿನಕಳೆದಂತೆ ರಾಜನ್ ಮತ್ತು ಅನಿತಾ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು ಎಂದು ತಂದೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅವರಿಬ್ಬರ ಅನೈತಿಕ ಸಂಬಂಧ ತಿಳಿದ ತಕ್ಷಣ ಅರವಿಂದ್ ರಾಜನ್‍ನನ್ನು ಮನೆಯಿಂದ ಹೊರಹಾಕಿದ್ದನು. ನಂತರ ರಾಜನ್ ಆ ಮನೆಯ ಸಮೀಪದಲ್ಲಿ ಬೇರೆ ಬಾಡಿಗೆ ಮನೆ ಮಾಡಿಕೊಂಡಿದ್ದನು. ಆದರೂ ಪತ್ನಿ ಅನಿತಾ ಆತನನ್ನು ಭೇಟಿ ಮಾಡುತ್ತಿದ್ದಳು. ಇದನ್ನು ಗಮನಿಸಿದ ಅರವಿಂದ್ ಮತ್ತೆ ಭೇಟಿಯಾಗಬಾರದೆಂದು ಎಚ್ಚರಿಸಿದ್ದನು. ಇದೇ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಅಂದರೆ ಮಂಗಳವಾರ ರಾಜನ್ ರೂಮಿಗೆ ಪತ್ನಿ ಅನಿತಾ ಹೋಗುತ್ತಿದ್ದಳು. ಅದನ್ನು ಮೃತ ಅರವಿಂದ್ ತಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ ಪತಿಯನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿದ್ದಳು.
ಅದರಂತೆಯೇ ಬುಧವಾರ ಮುಂಜಾನೆ ಅನಿತಾ ರಾಜನ್ ಮನೆಗೆ ಬರುವಂತೆ ಅನುಕೂಲ ಮಾಡಿಕೊಟ್ಟಿದ್ದಳು. ಇತ್ತ ಅರವಿಂದ್ ನಿದ್ದೆ ಮಾಡುವಾಗ ಇಬ್ಬರು ಸೇರಿಕೊಂಡು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಸದ್ಯಕ್ಕೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.