ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

Public TV
2 Min Read
emv atm sbi

ಬೆಂಗಳೂರು: ಎಟಿಎಂ ಡೆಬಿಟ್ ಕಾರ್ಡ್ ಬಳಸುವ ಮಂದಿಯ ಮೊಬೈಲ್ ಗೆ ಈಗಾಗಲೇ ಬ್ಯಾಂಕ್ ಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲು ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಬಳಸಿ ಎಂದು ಮೆಸೇಜ್ ಕಳುಹಿಸಲು ಆರಂಭಿಸಿವೆ. ಬ್ಯಾಂಕ್ ಕಳುಹಿಸಿದ ಈ ಮಸೇಜ್ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೇ ಸ್ಪಾಮ್ ಮೆಸೇಜ್ ಎಂದು ಭಾವಿಸಿಬೇಡಿ. ಈ ಮಸೇಜ್ ನಿರ್ಲಕ್ಷಿಸಿದರೆ ಡಿಸೆಂಬರ್ 31 ರ ನಂತರ ನಿಮ್ಮ ಎಟಿಎಂ ಕಾರ್ಡ್ ನಿಷ್ಕ್ರೀಯವಾಗಲಿದೆ.

ಹೌದು, ದೇಶದಲ್ಲಿ ಆನ್‍ಲೈನ್ ವಂಚಕರ ಹಾವಳಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಎಲ್ಲ ಬ್ಯಾಂಕ್ ಗಳಿಗೆ ಇಎಂವಿ ಚಿಪ್ ಇರುವ ಡೆಬಿಟ್ ಕಾರ್ಡ್ ನೀಡುವಂತೆ ಸೂಚಿಸಿದೆ. ಹೀಗಾಗಿ ಏನಿದು ಇಎಂವಿ ಚಿಪ್? ಹೇಗೆ ಭಿನ್ನ? ಬ್ಯಾಂಕ್ ಖಾತೆಗಳಿಗೆ ಸುರಕ್ಷತೆ ನೀಡುತ್ತಾ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ.

EMV magstripe

ಏನಿದು ಇಎಂವಿ ಚಿಪ್ ಕಾರ್ಡ್?
ಸುಲಭವಾಗಿ ಹೇಳುವುದಾದರೆ ಮೊಬೈಲ್ ನಲ್ಲಿ ಕರೆ ಮಾಡಬೇಕಾದರೆ ಒಂದು ಸಿಮ್ ಇರಬೇಕೋ ಹಾಗೆಯೇ ಈ ಇಎಂವಿಯಲ್ಲೂ ಒಂದು ಚಿಪ್ ಇರುತ್ತದೆ. ಯುರೊಪೇ  ಮಾಸ್ಟರ್‌ಕಾರ್ಡು ವೀಸಾ ಹೃಸ್ವ ರೂಪವೇ ಇಎಂವಿ. ಈ ಹಿಂದೆ ಬಳಕೆಯಾಗುತ್ತಿದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಿಂತ ಈ ಕಾರ್ಡ್ ಹೆಚ್ಚು ರಕ್ಷಣೆ ನೀಡುವ ಕಾರಣ ಎಲ್ಲ ಬ್ಯಾಂಕ್ ಗಳು ಈಗ ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಗಳನ್ನೇ ನೀಡುತ್ತಿವೆ.

ಹಳೆ ಎಟಿಎಂ ಕಾರ್ಡ್ ಅಪಾಯಕಾರಿ ಯಾಕೆ?
ಕಾರ್ಡ್ ಹಿಂದಿರುವ ಕಪ್ಪು ಬಣ್ಣದ ಮ್ಯಾಗ್ನೆಟಿಕ್ ಸ್ಟ್ರೈಪ್ ನಲ್ಲಿ ಎನ್ ಕ್ರಿಪ್ಟ್ ಆಗಿರುವ ಡೇಟಾಗಳನ್ನು ಕದಿಯುವುದು ಸುಲಭ. ಗ್ರಾಹಕರ ಕಾರ್ಡ್ ಕಳೆದು ಹೋದರೆ ಅಥವಾ ಕಳ್ಳರ ಪಾಲಾದರೆ ಸುಲಭವಾಗಿ ಖಾತೆಯಿಂದಲೇ ಹಣವನ್ನು ಎಗರಿಸಲು ಸಾಧ್ಯವಿದೆ. ಈಗ ನೀವು ಎಟಿಎಂನಲ್ಲಿ ಹಣ ಡ್ರಾ ಮಾಡಿದವರ ಖಾತೆಯಿಂದ ಕಳ್ಳರು ಹಣ ದೋಚಿದ ಸುದ್ದಿಯನ್ನು ನೀವು ಓದಿರಬಹುದು. ಎಟಿಎಂ ಗ್ರಾಹಕರ ಕಾರ್ಡ್ ಕಳೆದು ಹೋದರೆ, ಇಲ್ಲವೇ ಕಳ್ಳರ ಪಾಲಾದರೆ ಸುಲಭವಾಗಿ ಹಣ ದೋಚಲು ಹಳೆಯ ಕಾರ್ಡ್ ಗಳಲ್ಲಿ ಅವಕಾಶವಿದೆ. ಇವಿಎಂ ಚಿಪ್ ಆಧಾರಿತ ಕಾರ್ಡುಗಳು ಗ್ರಾಹಕರನ್ನು ರಕ್ಷಿಸುತ್ತದೆ. ಎಟಿಎಂ ಯಂತ್ರಗಳಿಗೆ ವಂಚಕರು ಪುಟ್ಟ ಸ್ಕಿಮ್ಮಿಂಗ್ ಉಪಕರಣವನ್ನು ಇಟ್ಟು ಕಳವು ಮಾಡುತ್ತಾರೆ. ಇವುಗಳನ್ನು ತಡೆಯಲು ಇಎಂವಿ ಕಾರ್ಡ್ ಸಮರ್ಥವಾಗಿದೆ.

atm cards

 

ಭಿನ್ನ ಹೇಗೆ?
ಹಿಂದಿನ ಎಟಿಎಂ ಕಾರ್ಡ್ ನಲ್ಲಿ ಗ್ರಾಹಕರ ಮಾಹಿತಿಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ನಲ್ಲಿ ಎನ್ ಕ್ರಿಪ್ಟ್ ಮಾಡಲಾಗಿರುತ್ತದೆ. ಆದರೆ ಇಎಂವಿಯಲ್ಲಿ ಗ್ರಾಹಕರ ಮಾಹಿತಿಗಳು ಚಿಪ್ ಒಳಗಡೆ ಇರುತ್ತದೆ. ಇಎಂವಿ ಚಿಪ್ ಕಾರ್ಡ್ ಮೂಲಕ ನಡೆದ ವಹಿವಾಟಿನ ಪರಿಶೀಲನೆಗೆ ಒಂದು ವಿಶೇಷ ವಹಿವಾಟು ಕೋಡ್ ಇರುತ್ತದೆ. ಈ ಕೋಡ್ ಬಳಕೆದಾರರ ವೆರಿಫಿಕೇಶನ್ ಮಾಡುತ್ತದೆ.

ಹೊಸ ಎಟಿಎಂ ಎಲ್ಲಿ ಸಿಗುತ್ತೆ?
ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಹೊಸ ಎಟಿಎಂ ಕಾರ್ಡ್ ಪಡೆದುಕೊಳ್ಳಬಹುದು. ಅಥವಾ ನೇರವಾಗಿ ಬ್ಯಾಂಕ್ ಖಾತೆಗೆ ತೆರಳಿ ಕಾರ್ಡ್ ಗಾಗಿ ಮನವಿ ಸಲ್ಲಿಸಬಹುದು. ಈ ಸೇವೆಗೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ.

 

Share This Article
Leave a Comment

Leave a Reply

Your email address will not be published. Required fields are marked *