ಧಾರವಾಡ: ರಾಜ್ಯ ಕಂಡ ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲಿ ಏನು ಆಗಿದೆ ಎನ್ನುವುದು ಚರ್ಚೆಯಾಗಬೇಕು. ಎರಡು ತಿಂಗಳಿಂದ ಹಿಂದಷ್ಟೇ ಅಧಿಕಾರಕ್ಕೆ ಬಂದ ದೇವೇಗೌಡ್ರ ಮಗನ ಮೇಲೆ ಆರೋಪ ಮಾಡಿದರೆ ಹೇಗೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ನಿವಾಸಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭೇಟಿ ನೀಡಿ, ಬಳಿಕ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಯಾರ ಯಾರ ಕಾಲದಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಿದೆ. ಮೈಸೂರು ಅಭಿವೃದ್ಧಿ ಎಷ್ಟು ಆಗಿದೆ ಎನ್ನುವುದರ ಬಗ್ಗೆ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ಕೊಟ್ಟಿದ್ದೇನೆ. ಹೀಗಾಗಿ ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ನೀಡಿಲ್ಲ ಎನ್ನುವ ಚರ್ಚೆ ಬೇಡ ಎಂದು ಅವರು ಹೇಳಿದರು.
ಸದನದಲ್ಲಿ ಮೈಸೂರು ಭಾಗಕ್ಕೆ ಯಾರ ಕಾಲದಲ್ಲಿ ಹೆಚ್ಚು ಕೊಡುಗೆ ನೀಡಲಾಗಿದೆ. ರಸ್ತೆ, ಸಕ್ಕರೆ ಕಾರ್ಖಾನೆ ಸೇರಿದಂತೆ ಅನೇಕ ಯೋಜನೆ, ಕೊಡುಗೆ ಹಾಗೂ ನಂಜುಡಪ್ಪ ವರದಿಯನ್ನು ಸುದೀರ್ಘವಾಗಿ ಎರಡ್ಮೂರು ದಿನ ಚರ್ಚೆ ನಡೆಸಬೇಕು. ಆಗ ಮಾತ್ರ ಈ ರೀತಿ ಆರೋಪ ಮಾಡುವುದು ನಿಲ್ಲುತ್ತದೆ. ಈಗಿರುವ ಅಸಮಾಧಾನ ತಿಳಿಯಾಗಲು ಅಂಕಿ ಸಂಖ್ಯೆಗಳ ಮೇಲೆ ಚರ್ಚೆ ನಡೆಸಲಿ ಎಂದು ವಾಗ್ದಾಳಿ ನಡೆಸಿದರು.
ಇಲ್ಲಿಯವರೆಗೆ 26 ವರ್ಷ ಲಿಂಗಾಯತರು ರಾಜ್ಯವನ್ನು ಆಳಿದ್ದಾರೆ. ರಾಮಕೃಷ್ಣ ಹೆಗಡೆ ಮತ್ತು ದೇವರಾಜ್ ಅರಸು ಕೆಲ ವರ್ಷ ಆಳ್ವಿಕೆ ನಡೆಸಿದ್ದರು. ದೇವೇಗೌಡ್ರ ಮಗ ಈಗಷ್ಟೇ ಸಿಎಂ ಆಗಿದ್ದಾರೆ. ಹೀಗಾಗಿ ಎಲ್ಲ ನಿರ್ಧಾರ ಕೈಗೊಂಡರೆ ಹೇಗೆ ಎಂದು ಪ್ರಶ್ನಿಸಿದರು.