Tuesday, 17th July 2018

ಮಂಗ್ಳೂರು ಗಲಭೆ ಯಾಕೆ ನಿಯಂತ್ರಣ ಆಗ್ಲಿಲ್ಲ- ಐಪಿಎಸ್ ಅಧಿಕಾರಿಗಳಿಗೆ ಸಿಎಂ ಕ್ಲಾಸ್

ಬೆಂಗಳೂರು: ಯಾರ್ರಿ ಕೋಮುಗಲಭೆಗೆ ಸ್ಕೆಚ್ ಹಾಕಿದ್ದು? ಸ್ಕೆಚ್ ಗೊತ್ತಿದ್ದು ನಾಟಕ ಆಡೋ ಯಾರನ್ನೂ ಬಿಡೋದಿಲ್ಲ ಅಂತ ಮಾಧ್ಯಮದ ಮುಂದೆ ಹೇಳ್ತೀರಿ. ಕಳೆದ ಒಂದೂವರೆ ತಿಂಗಳಿನಿಂದ ಏನ್ ಏನ್ ಕೆಲ್ಸಾ ಮಾಡಿದ್ದೀರಿ ಹೇಳಿ ಎಂದು ಮಂಗಳೂರು ಪೊಲೀಸ್ ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದ್ದಾರೆ.

 

ಇಂದು ನಗರದ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಕೋಮು ದಳ್ಳುರಿ ಹೆಸರಲ್ಲಿ ಬೇಳೆ ಬೇಯಿಸಿ ಕೊಳ್ತಿರೋರ ಮೇಲೆ ಎಷ್ಟು ಕೇಸ್ ಹಾಕಿದ್ದೀರಾ.? ಕಲ್ಲು ತೂರಾಟ, ಲಾಠಿಚಾರ್ಜ್, ಹಲ್ಲೆ, ಕೊಲೆ ನಡೆಸಿದವ್ರರಲ್ಲಿ ಎಷ್ಟು ಜನರನ್ನ ಬಂಧಿಸಿದ್ದಿರಾ..? ಕರಾವಳಿಯಲ್ಲಿ ನಡೆದ ಗಲಭೆಯಲ್ಲಿ ರಾಜಕೀಯ ಮುಖಂಡರ ಕೈವಾಡ ಎಷ್ಟು..?. ನಿಮಗೆಲ್ಲಾ ಹೋಲಿಸಿಕೊಂಡ್ರೆ ಬೆಂಗಳೂರಿನ ಅಧಿಕಾರಿಗಳು ಪರವಾಗಿಲ್ಲ. ಏನಾದ್ರೂ ಆಯ್ತು ಅಂದ ಕೂಡ್ಲೆ ಸ್ಪಾಟ್ ಗೆ ಹೋಗ್ತಾರೆ. ಎಸ್‍ಪಿಗಳು ಸ್ಪಾಟ್‍ಗೆ ಹೋಗ್ಬೇಕು ಅಂದ್ರೆ ಐದು ಹೆಣ ಬೀಳ್ಬೇಕಾ..?. ಇಲ್ಲ ಅಂದ್ರೆ ಆಫೀಸಲ್ಲೇ ಕೂತು ಕಾಲ ಕಳಿತೀರಾ. ವಾರಕ್ಕೆ ಎಷ್ಟು ರೌಂಡ್ಸ್ ಮಾಡ್ತೀರಿ ಹೇಳಿ? ಗಲಭೆ ಬಗ್ಗೆ ವರದಿ ಮಾಡುತ್ತಿರುವ ಮಾಧ್ಯಮಗಳಿಗೆ ಸೂಚನೆ ನೀಡಿದ್ದೀರಾ..? ನಿಮ್ಮ ಬೇಕಾಬಿಟ್ಟಿ ಕೆಲಸವನ್ನು ಇನ್ಮುಂದೆ ಸಹಿಸಲು ಸಾಧ್ಯವೇ ಇಲ್ಲ ಅಂತಾ ಸಭೆಯಲ್ಲಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಸಭೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಬಗ್ಗೆ ಮಾಹಿತಿ ಹಾಗೂ ಕೃತ್ಯಗಳ ಸಮಾಲೋಚನೆ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಯಿಂದಾಗಿ ಮಂಗಳೂರು ಐಜಿಪಿ ಹರಿಶೇಖರನ್, ಎಸ್‍ಪಿ ಸುದೀರ್ ಕುಮಾರ್ ರೆಡ್ಡಿ, ಮಂಗಳೂರು ಕಮಿಷನರ್ ಟಿ.ಆರ್ ಸುರೇಶ್ ಅವರನ್ನು ನೋಡುತ್ತಿದ್ದಂತೆಯೇ ಸಿಎಂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

 

ಮಾಧ್ಯಮಗಳು ಸುದ್ದಿ ತೋರಿಸ್ತವೆ ಅವರಿಗೇನಾದ್ರೂ ಸೂಚನೆ ನೀಡಿದ್ದೀರಾ? ಅವರಿಗೆ ಯಾವುದಾದ್ರೂ ಆದೇಶವೇನಾದ್ರೂ ಕೊಟ್ಟಿದ್ದೀರಾ? ಕಾವೇರಿ ಗಲಾಟೆಯಾದಾಗ ಪೊಲೀಸ್ ಕಮಿಷನರ್ ಖುದ್ದಾಗಿ ಮನವಿ ಮಾಡಿದ್ರು. ನೀವು ಇದೂವರೆಗೂ ಮಾಧ್ಯಮಗಳ ಬಗ್ಗೆ ಯೋಚನೆಯಾದ್ರೂ ಮಾಡಿದ್ದೀರಾ? ಅಂತಾ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದಾರೆ.

ಪೊಲೀಸ್ ಮಹಾ ನಿರ್ದೇಶಕ ಆರ್‍ಕೆ ದತ್ತಾ, ಹಿರಿಯ ಅಧಿಕಾರಿಗಳಾದ ಡಿಜಿ ರೂಪ್ ಕುಮಾರ್ ದತ್ತಾ, ಎಂಎನ್ ರೆಡ್ಡಿ, ಅಲೋಕ್ ಮೋಹನ್, ಗಗನ್ ದೀಪ್ ಸೇರಿದಂತೆ ಎಲ್ಲಾ ಐಪಿಎಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *